ಮೈಸೂರು ಮೂಲದ ನಾಟಿ ವೈದ್ಯರ ಅಪಹರಣ ಮತ್ತು ಹತ್ಯೆ ಪ್ರಕರಣ: ಕೇರಳ ಹೈಕೋರ್ಟ್ ನಿಂದ ಮೂವರಿಗೆ ಜೈಲು ಶಿಕ್ಷೆ
ಮೂಲವ್ಯಾಧಿ ಚಿಕಿತ್ಸೆಯ ಮೂಲ ಅರಿಯಲು ಒಂದು ವರ್ಷ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದ ಆರೋಪಿಗಳು!

ಸಾಂದರ್ಭಿಕ ಚಿತ್ರ | PC : freepik.com
ಮಲಪ್ಪುರಂ: 2019ರಲ್ಲಿ ಮೈಸೂರು ಮೂಲದ ನಾಟಿ ವೈದ್ಯರೊಬ್ಬರನ್ನು ಅಪಹರಿಸಿ, ಅವರನ್ನು ನೀಲಾಂಬೂರ್ ನಲ್ಲಿರುವ ಆರೋಪಿಯೊಬ್ಬನ ನಿವಾಸದಲ್ಲಿ ಭೀಕರವಾಗಿ ಹತ್ಯೆಗೈದಿದ್ದ ಆರೋಪಕ್ಕೆ ಗುರಿಯಾಗಿದ್ದ ಮೂವರಿಗೆ ಕೇರಳ ನ್ಯಾಯಾಲಯವೊಂದು 5 ವರ್ಷದಿಂದ 13 ವರ್ಷದವರೆಗಿನ ವಿಭಿನ್ನ ಅವಧಿಯ ಜೈಲು ಶಿಕ್ಷೆಯನ್ನು ವಿಧಿಸಿದೆ.
2019ರಲ್ಲಿ 60 ವರ್ಷದ ನಾಟಿ ವೈದ್ಯರಾದ ಶಾಬಾ ಶರೀಫ್ ಎಂಬುವವರನ್ನು ಅಪಹರಿಸಿ, ಅವರನ್ನು ಹತ್ಯೆಗೈದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶ ತುಷಾರ್ ಎಂ. ಅವರು ಮುಖ್ಯ ಆರೋಪಿ ಶೈಬಿನ್ ಅಶ್ರಫ್ ಗೆ ಒಟ್ಟಾರೆ 13 ವರ್ಷ ಹಾಗೂ ಒಂಭತ್ತು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
ಮುಖ್ಯ ಆರೋಪಿ ಶೈಬಿನ್ ಅಶ್ರಫ್ ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಅಡಿ ಎಂಟು ವರ್ಷ, ಸೆಕ್ಷನ್ 347ರ ಅಡಿ ಮೂರು ವರ್ಷ, ಸೆಕ್ಷನ್ 120ಬಿ ಅಡಿ ಎರಡು ವರ್ಷ ಹಾಗೂ ಸೆಕ್ಷನ್ 201ರ ಅಡಿ ಒಂಭತ್ತು ತಿಂಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಎಂದು ಸಾರ್ವಜನಿಕ ಅಭಿಯೋಜಕ ಇ.ಎಂ.ಕೃಷ್ಣನ್ ನಂಬೂದಿರಿ ತಿಳಿಸಿದ್ದಾರೆ.
ಮತ್ತೊಬ್ಬ ಅಪರಾಧಿ ಶಿಹಾಬುದ್ದೀನ್ ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ ಅಡಿ ಎರಡು ವರ್ಷ, ಸೆಕ್ಷನ್ 347ರ ಅಡಿ ಮೂರು ವರ್ಷ, ಸೆಕ್ಷನ್ 365ರ ಅಡಿ ಮೂರು ವರ್ಷ ಹಾಗೂ ಸೆಕ್ಷನ್ 201ರ ಅಡಿ ಒಂಭತ್ತು ತಿಂಗಳು ಸೇರಿದಂತೆ ಒಟ್ಟಾರೆ ಎಂಟು ವರ್ಷ ಮತ್ತು ಒಂಭತ್ತು ತಿಂಗಳ ಕಾರಾಗೃಹ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಲಾಗಿದೆ.
ಮೂರನೆಯ ಅಪರಾಧಿ ನಿಶಾದ್ ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ ಅಡಿ ಎರಡು ವರ್ಷ, ಸೆಕ್ಷನ್ 347ರ ಅಡಿ ಮೂರು ವರ್ಷ ಹಾಗೂ ಸೆಕ್ಷನ್ 201ರ ಅಡಿ ಒಂಭತ್ತು ತಿಂಗಳ ಸೇರಿದಂತೆ ಒಟ್ಟು ಐದು ವರ್ಷ ಮತ್ತು ಒಂಭತ್ತು ತಿಂಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.
ಇದಲ್ಲದೆ, ಮೂವರು ಅಪರಾಧಿಗಳಿಗೆ 3.5 ಲಕ್ಷ ರೂ. ದಂಡವನ್ನೂ ವಿಧಿಸಿರುವ ನ್ಯಾಯಾಲಯ, ಒಂದು ವೇಳೆ ಆ ದಂಡದ ಮೊತ್ತವನ್ನು ಅವರಿಂದೇನಾದರೂ ವಸೂಲು ಮಾಡಿದರೆ, ಅದನ್ನು ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಬೇಕು ಎಂದೂ ಆದೇಶಿಸಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 20ರಂದು ಮೂವರು ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದ ನ್ಯಾಯಾಲಯ, ಇನ್ನುಳಿದ ಒಂಭತ್ತು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಮೂವರು ಆರೋಪಿಗಳನ್ನು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿದ ನಂತರ, ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕರಣದ ಸಾರ್ವಜನಿಕ ಅಭಿಯೋಜಕ ಇ.ಎಂ.ಕೃಷ್ಣನ್, ಆರೋಪಿ ಅಶ್ರಫ್ ಕಾರಿನಲ್ಲಿ ದೊರೆತ ಒಂದೇ ಒಂದು ಕೂದಲು ಶರೀಫ್ ಅವರನ್ನು ಹತ್ಯೆಗೈದು, ನಂತರ ಅವರ ಮೃತ ದೇಹವನ್ನು ವಿಲೇವಾರಿ ಮಾಡಲಾಗಿದೆ ಎಂದು ಸಾಬೀತು ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ತಿಳಿಸಿದ್ದಾರೆ.
“ಮೃತ ದೇಹ ಅಥವಾ ಮೃತ ದೇಹದ ಯಾವುದೇ ಭಾಗಗಳು ಪತ್ತೆಯಾಗದೆ ಇದ್ದುದರಿಂದ, ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವುದು ತುಂಬಾ ಸವಾಲಿನ ಕೆಲಸವಾಗಿತ್ತು” ಎಂದು ಹೇಳಿದ ಅವರು, ಪೊಲೀಸರ ತನಿಖಾ ವೈಖರಿಯನ್ನು ಪ್ರಶಂಸಿಸಿದ್ದಾರೆ.
ಕೂದಲಿನಲ್ಲಿ ಶರೀಫ್ ಅವರ ಮೈಟೊಕಾಂಡ್ರಿಯಾ ಡಿಎನ್ಎ ಪತ್ತೆಯಾಗಿದ್ದರಿಂದಾಗಿ, ಆರೋಪಿಗಳು ಶರೀಫ್ ರನ್ನು ಅಪಹರಿಸಿರುವುದು, ಅವರನ್ನು ಅಕ್ರಮ ಬಂಧನದಲ್ಲಿರಿಸಿರುವುದು ಹಾಗೂ ಹತ್ಯೆಗೈದಿರುವುದನ್ನು ಸಾಬೀತು ಪಡಿಸಲು ಸಾಧ್ಯಸವಾಯಿತು ಎಂದು ಅವರು ತಿಳಿಸಿದ್ದಾರೆ.
2022ರಲ್ಲಿ ನಡೆದಿದ್ದ ದರೋಡೆ ಪ್ರಕರಣವೊಂದರ ತನಿಖೆ ನಡೆಸುವಾಗ ಈ ಅಪಹರಣ ಹಾಗೂ ಹತ್ಯೆ ಪ್ರಕರಣ ಬಯಲಿಗೆ ಬಂದಿತ್ತು.
ಮಲಪ್ಪುರಂ ಜಿಲ್ಲೆಯ ಕೈಪಂಚೇರಿಯ ಉದ್ಯಮಿಯಾದ ಅಶ್ರಫ್ ಎಂಬಾತನು ತನ್ನ ಸ್ನೇಹಿತರ ವಿರುದ್ಧ ವಿರುದ್ಧ ಕಳವು ಪ್ರಕರಣ ದಾಖಲಿಸಿದ್ದನು. ಇದರ ವಿರುದ್ಧ ತಿರುವನಂತಪುರಂನಲ್ಲಿರುವ ವಿಧಾನಸಭಾ ಕಾರ್ಯಾಲಯದೆದುರು ಗದ್ದಲ ನಡೆಸಿದ್ದ ಉದ್ಯಮಿಯ ಸ್ನೇಹಿತರು, ಉದ್ಯಮಿಯು ನಮ್ಮನ್ನು ಬೆದರಿಸುತ್ತಿದ್ದಾನೆ ಎಂದು ಆರೋಪಿಸಿ, ಆತ್ಮಾಹುತಿ ಪ್ರಯತ್ನ ನಡೆಸಿದ್ದರು.
ಈ ವೇಳೆ ಆತನನ್ನು ಬಂಧಿಸಿದ್ದ ಪೊಲೀಸರು, ಮಲಪ್ಪುರಂ ಪೊಲೀಸರಿಗೆ ಹಸ್ತಾಂತರಿಸಿದ್ದರು. ವಿಚಾರಣೆಗೊಳಪಡಿಸಿದಾಗ, ಮೈಸೂರು ಮೂಲದ ನಾಟಿ ವೈದ್ಯರೊಬ್ಬರನ್ನು ಅಪಹರಿಸಿ, ಹತ್ಯೆಗೈದಿದ್ದ ಘಟನೆ ಬೆಳಕಿಗೆ ಬಂದಿತ್ತು.
ಈ ಪೈಕಿ ಆರೋಪಿಯೊಬ್ಬ ಆಶ್ರ ಫ್ ನ ನಿವಾಸದಲ್ಲಿ ಅಕ್ರಮವಾಗಿ ಕೂಡಿ ಹಾಕಲಾಗಿದ್ದ ಮೃತ ಶರೀಫ್ ಅವರ ವಿಡಿಯೊವೊಂದನ್ನು ಒಳಗೊಂಡಿದ್ದ ಪೆನ್ ಡ್ರೈವ್ ಅನ್ನೂ ಪೊಲೀಸರಿಗೆ ಹಸ್ತಾಂತರಿಸಿದ್ದನು. ಇದರ ಬೆನ್ನಿಗೇ, 2019ರಲ್ಲಿ ಶರೀಫ್ ಕುಟುಂಬವು ಅವರು ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿರುವುದು ತನಿಖೆಯ ವೇಳೆ ಪತ್ತೆಯಾಗಿತ್ತು.
ಇದಾದ ನಂತರ, ಮೂಲವ್ಯಾಧಿಯನ್ನು ಗುಣಪಡಿಸಲು ಶರೀಫ್ ನೀಡುತ್ತಿದ್ದ ಗೋಪ್ಯ ಚಿಕಿತ್ಸಾ ವಿಧಾನವನ್ನು ಅರಿಯಲು, ಅವರನ್ನು ಒಂದು ವರ್ಷ ಕಾಲ ಅಶ್ರಫ್ ರ ನಿವಾಸದಲ್ಲಿ ಅಕ್ರಮವಾಗಿ ಕೂಡಿ ಹಾಕಿ, ಚಿತ್ರಹಿಂಸೆ ನೀಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಆದರೆ, ಆರೋಪಿಗಳ ಕಿರುಕುಳದಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಶರೀಫ್ ರ ಮೃತ ದೇಹವನ್ನು ತುಂಡುಗಳನ್ನಾಗಿ ಕತ್ತರಿಸಿದ್ದ ಆರೋಪಿಗಳು, ಅವನ್ನು ನದಿಯಲ್ಲಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಔಷಧ ಸೂತ್ರದ ಮೇಲೆ ಹಿಡಿತ ಸಾಧಿಸಿದ ನಂತರ, ಚಿಕಿತ್ಸಾಲಯವೊಂದನ್ನು ತೆರೆದು, ಭಾರಿ ಲಾಭ ಮಾಡುವ ಯೋಜನೆಯನ್ನು ಅಶ್ರಫ್ ಹೊಂದಿದ್ದ ಎನ್ನಲಾಗಿದೆ. ಆದರೆ, ಈ ಪ್ರಯತ್ನದಲ್ಲಿ ಅಶ್ರ,ಫ್ ಹಾಗೂ ಅವರ ಸ್ನೇಹಿತರು ವಿಫಲವಾಗಿದ್ದರಿಂದ, ಸ್ನೇಹಿತರು ಅಶ್ರಫ್ ನ ಬೆಲೆಬಾಳುವ ವಸ್ತುಗಳು ಹಾಗೂ ನಗದನ್ನು ಕಳವು ಮಾಡಿ ಪರಾರಿಯಾಗಿದ್ದರು. ಹೀಗಾಗಿ, ಅಶ್ರಫ್ ತನ್ನ ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದನು.







