ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿದ ಸರ್ವಪಕ್ಷಗಳ ನಿಯೋಗ: ಟಿಎಂಸಿಯನ್ನು ಪ್ರತಿನಿಧಿಸಲಿರುವ ಅಭಿಷೇಕ್ ಬ್ಯಾನರ್ಜಿ

ಅಭಿಷೇಕ್ ಬ್ಯಾನರ್ಜಿ | PTI
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿದ ಸರ್ವಪಕ್ಷಗಳ ನಿಯೋಗದಲ್ಲಿ ಟಿಎಂಸಿಯನ್ನು ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸಲಿದ್ದಾರೆ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಮೇ 10ರಂದು ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಕುರಿತು ಅಂತಾರಾಷ್ಟ್ರೀಯ ಸಮುದಾಯಗಳಿಗೆ ಮನವರಿಕೆ ಮಾಡಿಕೊಡಲು ರಚಿಸಲಾಗಿರುವ ಸಂಸದೀಯ ಸರ್ವಪಕ್ಷಗಳ ನಿಯೋಗದಲ್ಲಿ ಟಿಎಂಸಿ ಪ್ರತಿನಿಧಿಯನ್ನಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಹೆಸರನ್ನು ಮಂಗಳವಾರ ಟಿಎಂಸಿ ಶಿಫಾರಸು ಮಾಡಿದೆ.
ಸಂಸದೀಯ ಸರ್ವಪಕ್ಷಗಳ ನಿಯೋಗದಲ್ಲಿನ ಟಿಎಂಸಿ ಪ್ರಾತಿನಿಧ್ಯದ ಕುರಿತು ಚರ್ಚಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಂಪರ್ಕಿಸಿದ ನಂತರ, ಈ ನಿರ್ಧಾರ ಹೊರ ಬಿದ್ದಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, “ಭಯೋತ್ಪಾದನೆಯ ವಿರುದ್ಧ ಜಗತ್ತಿನ ಗಮನ ಸೆಳೆಯಲು ಭಾರತ ರಚಿಸಿರುವ ಸಂಸದೀಯ ಸರ್ವಪಕ್ಷಗಳ ನಿಯೋಗದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯನ್ನಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಹೆಸರನ್ನು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಾಮನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಲು ನಮಗೆ ಹರ್ಷವಾಗುತ್ತಿದೆ” ಎಂದು ಹೇಳಿದೆ.
ಇದಕ್ಕೂ ಒಂದು ದಿನ ಮುನ್ನ, ಇಂತಹ ನಿಯೋಗಗಳ ಸದಸ್ಯರ ಹೆಸರನ್ನು ಅಂತಿಮಗೊಳಿಸುವುದಕ್ಕೂ ಮುನ್ನ, ವ್ಯಾಪಕ ಸಮಾಲೋಚನೆ ನಡೆಯಬೇಕಾದ ಅಗತ್ಯವಿದೆ ಎಂದು ಅಭಿಷೇಕ್ ಬ್ಯಾನರ್ಜಿ ಧ್ವನಿ ಎತ್ತಿದ್ದರು.
“ಸಂಸದೀಯ ನಿಯೋಗದ ಸದಸ್ಯರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ನಿಯೋಗದಲ್ಲಿ ಯಾವ ಪಕ್ಷದಿಂದ ಯಾವ ಸದಸ್ಯರು ಹೋಗಲಿದ್ದಾರೆ ಎಂಬುದನ್ನು ಕೇಂದ್ರ ಸರಕಾರ ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ” ಎಂದು ಅವರು ಎಚ್ಚರಿಸಿದ್ದರು.
“ಅವರು ನಿಯೋಗದ ಸದಸ್ಯರ ಹೆಸರುಗಳನ್ನು ಕೇಳಬೇಕು ಹಾಗೂ ಈ ಕುರಿತು ಎಲ್ಲ ಪಕ್ಷಗಳು, ವಿಶೇಷವಾಗಿ ವಿರೋಧ ಪಕ್ಷಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು. ನೀವು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಐದು ಮಂದಿ ಸದಸ್ಯರ ಹೆಸರನ್ನು ಕೇಳಿದರೆ, ನಾವು ಆ ಐದು ಮಂದಿ ಸಂಸದರ ಹೆಸರನ್ನು ನಾಮನಿರ್ದೇಶನ ಮಾಡುತ್ತೇವೆ” ಎಂದು ಅವರು ಹೇಳಿದ್ದರು.
ಈ ನಿಯೋಗದಲ್ಲಿ ಸಂಸದರು ಹಾಗೂ ವಿವಿಧ ಪಕ್ಷಗಳ ಮಾಜಿ ಸಚಿವರಲ್ಲದೆ, ಎಂಟು ಮಂದಿ ಮಾಜಿ ರಾಯಭಾರಿಗಳು ಸೇರಿದಂತೆ ಒಟ್ಟು 51 ಮಂದಿ ರಾಜಕೀಯ ನಾಯಕರು ಇರಲಿದ್ದಾರೆ. ಈ ಸದಸ್ಯರು ಏಳು ನಿಯೋಗಗಳನ್ನು ರಚಿಸಲಿದ್ದು, ಈ ನಿಯೋಗಗಳು ವಿಶ್ವದ ಹಲವಾರು ದೇಶಗಳ ರಾಜಧಾನಿಗಳಿಗೆ ಪ್ರಯಾಣಿಸಿ, ಭಯೋತ್ಪಾದನೆ ನಿಗ್ರಹ ಪ್ರಯತ್ನಗಳು ಹಾಗೂ ಆಪರೇಷನ್ ಸಿಂಧೂರ್ ಕುರಿತ ಕುರಿತ ಭಾರತದ ನಿಲುವನ್ನು ಆ ದೇಶಗಳೆದುರು ಮಂಡಿಸಲಿವೆ.







