ಬಿಹಾರದಲ್ಲಿ ಶೇ. 37 ಮತದಾರರು ಅರ್ಹತಾ ಪುರಾವೆ ಸಲ್ಲಿಸಬೇಕಾಗುತ್ತದೆ: ಚುನಾವಣಾ ಆಯೋಗ

ಚುನಾವಣಾ ಆಯೋಗ | PC : PTI
ಪಾಟ್ನಾ: ಬಿಹಾರದ ಒಟ್ಟು 7.89 ಕೋಟಿ ಮತದಾರರ ಪೈಕಿ 4.96 ಕೋಟಿ ಮಂದಿಯ ಹೆಸರು 2003 ಜನವರಿ 1ರಂದು ಪ್ರಕಟವಾಗಿದ್ದ ತೀವ್ರ ಪರಿಷ್ಕೃತ ಮತದಾರರ ಪಟ್ಟಿಯಲ್ಲಿದ್ದವು. ಆದುದರಿಂದ ಅವರು ಈ ಸಲದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ನೀಡಲಾಗುವ ಗಣತಿ ಫಾರಂ ಅನ್ನು ಭರ್ತಿ ಮಾಡಿ ಸಲ್ಲಿಸಿದರೆ ಸಾಕಾಗುತ್ತದೆ ಎಂದು ಚುನಾವಣಾ ಆಯೋಗ ಶನಿವಾರ ಹೇಳಿದೆ.
ಆದರೆ, 2003ರಲ್ಲಿ ಮತದಾರರ ಪಟ್ಟಿಯ ಕೊನೆಯ ಪರಿಷ್ಕರಣೆ ನಡೆಸಿದ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ 2.93 ಕೋಟಿ ಅಥವಾ ಸುಮಾರು ಶೇ. 37 ಮತದಾರರು ತಮ್ಮ ಅರ್ಹತಾ ಪುರಾವೆಗಳನ್ನು ಸಲ್ಲಿಬೇಕಾಗುತ್ತದೆ.
ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಮುನ್ನ ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಜೂನ್ 24ರಂದು ಘೋಷಿಸಿತ್ತು.
ತ್ವರಿತ ನಗರೀಕರಣ, ಆಗಾಗ ವಲಸೆ, ಹೊಸ ಮತದಾರರು, ವರದಿಯಾಗದ ಮರಣ ಹಾಗೂ ವಿದೇಶಿ ಅಕ್ರಮ ವಲಸಿಗರ ಹೆಸರನ್ನು ಸೇರಿಸುವಂತಹ ಕಾರಣಗಳಿಗಳಿಂದ ಪರಿಷ್ಕರಣೆ ನಡೆಸುವುದು ಅಗತ್ಯವಾಗಿದೆ ಎಂದು ಚುನಾವಣಾ ಆಯೋಗ ಹೇಳಿತ್ತು.
2003ರಲ್ಲಿ ನಡೆದ ಕೊನೆಯ ವಿಶೇಷ ತೀವ್ರ ಪರಿಷ್ಕರಣೆಯ ನಂತರ ರಾಜ್ಯದಲ್ಲಿ ದಾಖಲೆ ರಹಿತ ವಲಸಿಗರು ಮತದಾರರ ಪಟ್ಟಿಯ ಭಾಗವಾಗಿರುವ ಕುರಿತು ಚುನಾವಣಾ ಆಯೋಗ ಮಾತನಾಡಿದ್ದು ಇದೇ ಮೊದಲು.
1987 ಜುಲೈ 1ರ ಮುನ್ನ ಜನಿಸಿದ ಮತದಾರರು ತಮ್ಮ ಜನನ ದಿನಾಂಕ ಹಾಗೂ ಹುಟ್ಟಿದ ಸ್ಥಳದ ಪುರಾವೆಯನ್ನು ತೋರಿಸಬೇಕು. 1987 ಜುಲೈ 1 ಹಾಗೂ 2004 ಡಿಸೆಂಬರ್ 2ರ ನಡುವೆ ಜನಿಸಿದ ಮತದಾರರು ತಮ್ಮ ಹೆತ್ತವರ ಜನನ ದಿನಾಂಕ ಹಾಗೂ ಹುಟ್ಟಿದ ಸ್ಥಳವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕು. 2004 ಡಿಸೆಂಬರ್ 4ರ ನಂತರ ಜನಿಸಿದ ಮತದಾರರು ತಂದೆ ಹಾಗೂ ತಾಯಿಯ ಜನ್ಮ ದಿನಾಂಕದ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.







