ಮಧ್ಯಪ್ರದೇಶದಲ್ಲಿ ಕಳೆದ ಮೂರು ತಿಂಗಳಲ್ಲಿ ಸುಮಾರು 78,000 ಮಕ್ಕಳಲ್ಲಿ ಅಪೌಷ್ಟಿಕತೆ: ಅಂಕಿ-ಅಂಶ ಮುಂದಿಟ್ಟ ಸಿಎಂ ಚೌಹಾಣ್

Photo: Twitter@NDTV
ಭೋಪಾಲ್: ಈ ಕ್ಯಾಲೆಂಡರ್ ವರ್ಷದ ಮೊದಲ ಮೂರು ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಸುಮಾರು 78,000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ರಾಜ್ಯ ಸರಕಾರ ಇಂದು ವಿಧಾನಸಭೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶ ನೀಡಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಆಹಾರದ ಕೊರತೆಯಿಂದ ಅಥವಾ ಅವರಿಗೆ ಉತ್ತಮವಾದ ಆಹಾರದ ಕೊರತೆಯಿಂದಾಗಿ ಸಾಮಾನ್ಯವಾಗಿ ದುರ್ಬಲ ಆರೋಗ್ಯವನ್ನು ಹೊಂದಿರುತ್ತಾರೆ. ಇದು ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ ಮತ್ತು ಕ್ಷೀಣತೆಯನ್ನು ಉಂಟು ಮಾಡಬಹುದು ಹಾಗೂ ಅವರ ತೂಕವನ್ನು ಕಡಿಮೆ ಮಾಡುತ್ತದೆ.
ಭಿಂದ್ ಜಿಲ್ಲೆಯ ಲಾಹರ್ ನ ಕಾಂಗ್ರೆಸ್ ಶಾಸಕರಾದ ಸಿಂಗ್, ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಸುಮಾರು 78,000 ಅಪೌಷ್ಟಿಕ ಮಕ್ಕಳು ಕಂಡುಬಂದಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿದರು.
ಅಟಲ್ ಬಿಹಾರಿ ವಾಜಪೇಯಿ ಮಕ್ಕಳ ಆರೋಗ್ಯ ಹಾಗೂ ಪೋಷಣೆ ಮಿಷನ್ ನ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಸಿಎಂ ಚೌಹಾಣ್ ಈ ಅಂಕಿ-ಅಂಶದಲ್ಲಿ 21,631 ತೀವ್ರ ಅಪೌಷ್ಟಿಕ ಮಕ್ಕಳು ಸೇರಿದ್ದಾರೆ" ಎಂದು ಹೇಳಿದರು.
ಸರಕಾರದ ಲಿಖಿತ ಉತ್ತರದ ಪ್ರಕಾರ, ಇಂದೋರ್ ವಿಭಾಗವು ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಹೊಂದಿದ್ದು ಅಲ್ಲಿ ಈ ರೀತಿಯ 22,721 ಮಕ್ಕಳಿದ್ದಾರೆ. ಈ ವಿಭಾಗವು ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಾದ ಅಲಿರಾಜ್ಪುರ ಹಾಗೂ ಝಬುವಾಗಳನ್ನು ಒಳಗೊಂಡಿದೆ.







