ಬಿಹಾರ ಎಸ್ಐಆರ್ | 12ನೇ ದಾಖಲೆಯಾಗಿ ಆಧಾರ್ ಸ್ವೀಕರಿಸಿ : ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಬಿಹಾರ ಎಸ್ಐಆರ್ಗೆ ಆಧಾರ್ ಕಾರ್ಡ್ ಅನ್ನು ಪುರಾವೆಯಾಗಿ ಪರಿಗಣಿಸುವಂತೆ ಭಾರತೀಯ ಚುನಾವಣಾ ಆಯೋಗವು ಬಿಹಾರದ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.
ಮಂಗಳವಾರ ಬಿಹಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಭಾರತೀಯ ಚುನಾವಣಾ ಆಯೋಗವು ಪತ್ರ ಬರೆದಿದ್ದು,ಆಧಾರ್ ಕಾರ್ಡ್ ಅನ್ನು ಪಟ್ಟಿ ಮಾಡಲಾದ 11 ದಾಖಲೆಗಳ ಜೊತೆಗೆ 12ನೇ ದಾಖಲೆಯಾಗಿ ಪರಿಗಣಿಸಬೇಕು ಎಂದು ಹೇಳಿದೆ.
ಆಧಾರ್ ಕಾಯ್ದೆಯ ಸೆಕ್ಷನ್ 9ರ ಪ್ರಕಾರ, ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಬಳಸಬೇಕು, ಪೌರತ್ವದ ಪುರಾವೆಯಾಗಿ ಅಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 23(4)ರಡಿಯಲ್ಲಿ ವ್ಯಕ್ತಿಯ ಗುರುತನ್ನು ಸಾಬೀತುಪಡಿಸುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಈ ನಿರ್ದೇಶನಕ್ಕೆ ಅನುಗುಣವಾಗಿ ಆಧಾರ್ ಅನ್ನು ಪರಿಗಣಿಸದಿರುವ ಅಥವಾ ಸ್ವೀಕರಿಸಲು ನಿರಾಕರಿಸುವ ಯಾವುದೇ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿತ್ತು. ಸೆಪ್ಟೆಂಬರ್ 9 ರೊಳಗೆ ನಿರ್ದೇಶನವನ್ನು ಜಾರಿಗೆ ತರುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.





