ಸೊಳ್ಳೆ ನಿವಾರಕ ಯಂತ್ರದಿಂದ ಬೆಂಕಿ ಆಕಸ್ಮಿಕ; ಮೂವರು ಮಕ್ಕಳು ಸೇರಿದಂತೆ ನಾಲ್ವರು ಮೃತ್ಯು

ಸಾಂದರ್ಭಿಕ ಚಿತ್ರ
ಚೆನ್ನೈ: ಮನೆಯ ಸೊಳ್ಳೆ ನಿವಾರಕ ಯಂತ್ರದಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ವೃದ್ದೆ ಹಾಗೂ ಅವರ ಮೂವರು ಮೊಮ್ಮಕ್ಕಳು ಉಸಿರುಕಟ್ಟಿ ಸಾವನ್ನಪ್ಪಿದ ಘಟನೆ ಇಲ್ಲಿನ ಮನಾಲಿ ಸಮೀಪದ ಮಾಥುರ್ನಲ್ಲಿ ನಡೆದಿದೆ.
ಮೃತಪಟ್ಟ ವೃದ್ಧೆಯನ್ನು ಸಂತಾನಲಕ್ಷ್ಮೀ (65) ಎಂದು ಗುರುತಿಸಲಾಗಿದೆ ಹಾಗೂ ಅವರ ಮೊಮ್ಮಕ್ಕಳನ್ನು ಸಂಧ್ಯಾ, ಪ್ರಿಯಾ ರಕ್ಷಿತ ಹಾಗೂ ಪವಿತ್ರ ಎಂದು ಗುರುತಿಸಲಾಗಿದೆ. ಇವರ ವಯಸ್ಸು 8ರಿಂದ 10 ವರ್ಷಗಳ ನಡುವೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಇವರು ನಿದ್ರೆಗೆ ಜಾರಿದ್ದ ಸಂದರ್ಭ ಈ ಬೆಂಕಿ ಆಕಸ್ಮಿಕ ಸಂಭವಿಸಿತು ಎಂದು ಅವರು ತಿಳಿಸಿದ್ದಾರೆ.
ಮನೆಯಿಂದ ಹೊಗೆ ಬರುತ್ತಿರುವುದನ್ನು ನೆರೆ ಮನೆಯವರು ಬೆಳಗ್ಗೆ ಗಮನಿಸಿದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕಿಂತ ಮುನ್ನವೇ ಪೊಲೀಸರು ಮನೆ ಒಳಗೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ನಾಲ್ವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ನಾಲ್ವರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ನಿದ್ರಿಸುತ್ತಿದ್ದ ಕೋಣೆಯಲ್ಲಿ ಸೊಳ್ಳೆ ನಿವಾರಕ ಯಂತ್ರ ಕೆಲವು ನೈಲಾನ್ ವಸ್ತುಗಳ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿತು ಎಂದು ಪೊಲೀಸರ ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ. ಮೂವರು ಮಕ್ಕಳ ತಾಯಿ ತಂದೆಯನ್ನು ನೋಡಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದುದರಿಂದ ಅವರು ರಾತ್ರಿ ಮಲಗಲು ಅಜ್ಜಿ ಮನೆಗೆ ತೆರಳಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







