ಕೇರಳ | ಶ್ರೀಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಆಕಸ್ಮಿಕ ಗುಂಡು ಹಾರಾಟ

PHOTO CREDIT | PTI
ತಿರುವನಂತಪುರ: ಇಲ್ಲಿಯ ಶ್ರೀಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಪೊಲೀಸ್ ಸಿಬ್ಬಂದಿಯೋರ್ವರು ತನ್ನ ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿದ್ದು ವರದಿಯಾಗಿದೆ. ಪೋಲಿಸ್ ಸಿಬ್ಬಂದಿ ತನ್ನ ಕರ್ತವ್ಯದ ಅವಧಿ ಮುಗಿದ ಬಳಿಕ ಮುಂದಿನ ಪಾಳಿಯ ಸಿಬ್ಬಂದಿಗೆ ಹಸ್ತಾಂತರಿಸಲು ತನ್ನ ಪಿಸ್ತೂಲನ್ನು ಸ್ವಚ್ಛಗೊಳಿಸುತ್ತಿದ್ದಾಗ ಗುಂಡು ಹಾರಿರಬಹುದು ಎಂದು ಶಂಕಿಸಲಾಗಿದೆ.
ಬೆಳಿಗ್ಗೆ 8:30ಕ್ಕೆ ನಡೆದ ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳನ್ನು ಇಡುವ ಕೋಣೆಯೊಳಗೆ ಈ ಆಕಸ್ಮಿಕ ಗುಂಡು ಹಾರಾಟ ಸಂಭವಿಸಿದೆ.
ಗುಂಡು ಹಾರಾಟದಿಂದ ಪ್ರದೇಶದಲ್ಲಿ ಭೀತಿ ಸೃಷ್ಟಿಯಾಗಿತ್ತಾದರೂ ದೇವಸ್ಥಾನದ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ಶೀಘ್ರವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಗುಂಡು ಹಾರಾಟಕ್ಕೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಸ್ಥಳೀಯ ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.
Next Story





