ಬಿಜೆಪಿಗೆ ಮತ ಚಲಾಯಿಸಿದ ಮಹಿಳೆ ಮೇಲೆ ಕುಟುಂಬಿಕರಿಂದ ಹಲ್ಲೆ ಆರೋಪ ; ಸಂತ್ರಸ್ತೆಯಿಂದ ಮಧ್ಯಪ್ರದೇಶ ಮುಖ್ಯಮಂತ್ರಿಯ ಭೇಟಿ

ಶಿವರಾಜ್ ಸಿಂಗ್ ಚೌಹಾಣ್ | Photo: @ChouhanShivraj \ X
ಭೋಪಾಲ್: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತಚಲಾಯಿಸಿದ್ದಕ್ಕಾಗಿ ತನ್ನ ಕುಟುಂಬಿಕರಿಂದ ಥಳಿತಕ್ಕೊಳಗಾದ ಮುಸ್ಲಿಂ ಮಹಿಳೆಯೊಬ್ಬರನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ತನ್ನ ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಬಿಜೆಪಿಗೆ ಮತಚಲಾಯಿಸಿದ ಸಮೀನಾ ಬಿ, ತನ್ನಿಬ್ಬರು ಮಕ್ಕಳೊಂದಿಗೆ ಚೌಹಾಣ್ ಅವರ ನಿವಾಸಕ್ಕೆ ಆಗಮಿಸಿದ್ದು, ತಮ್ಮ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತಹಾಕಿದ ಸಮೀನಾ.ಬಿ ಅವರನ್ನು ಆಕೆಯ ಕುಟುಂಬದ ಸದಸ್ಯರು ಥಳಿಸಿದ್ದಾರೆಂಬ ವರದಿಗಳನ್ನು ಕೇಳಿದ ಮುಖ್ಯಮಂತ್ರಿಯವರು ಆಕೆಯನ್ನು ಭೇಟಿಯಾಗಲು ನಿರ್ಧರಿಸಿದ್ದರೆಂದು ಮೂಲಗಳು ತಿಳಿಸವೆ.
ಸಮೀನಾ.ಬಿ ಹಾಗೂ ಆಕೆಯ ಮಕ್ಕಳ ಸುರಕ್ಷತೆಯ ಬಗ್ಗೆ ಶಿವರಾಜ್ ಸಿಂಗ್ ಭರವಸೆ ನೀಡಿದರು. ತನ್ನ ಮಕ್ಕಳ ಬಗ್ಗೆ ಮುಖ್ಯಮಂತ್ರಿಯವರು ತೋರಿದ ಕಾಳಜಿಗಾಗಿ ತಾನು ಮುಂದೆಯೂ ಬಿಜೆಪಿಗೆ ಮತಚಲಾಯಿಸುವುದಾಗಿ ಆಕೆ ಹೇಳಿದ್ದಾರೆ.
ʼನಾನು ಬಿಜೆಪಿಗೆ ಮತಹಾಕಿದ್ದನ್ನು ತಿಳಿದ ನನ್ನ ಭಾವ ಜಾವೆದ್ ನನ್ನ ಮೇಲೆ ಹಲ್ಲೆ ನಡೆಸಿದ್ದ. ಶಿವರಾಜ್ ಸಿಂಗ್ ಚೌಹಾಣ್ ಅವರ ಪಕ್ಷಕ್ಕೆ ಯಾಕೆ ಮತ ಚಲಾಯಿಸಿದ್ದೀ ಎಂದು ಆತ ನನ್ನನ್ನು ನಿಂದಿಸಿದ್ದ’ ಎಂದು ಆಕೆ ತಿಳಿಸಿದ್ದಾರೆ.
ನನ್ನ ಹಾಗೂ ನನ್ನ ಮಕ್ಕಳ ಸುರಕ್ಷತೆಯ ಖಾತರಿ ನೀಡುವುದಾಗಿ ಭಯ್ಯಾ (ಶಿವರಾಜ್ ಸಿಂಗ್ ಚೌಹಾಣ್) ಭರವಸೆ ನೀಡಿದ್ದಾರೆ. ನನ್ನ ಮತದಾನದ ಹಕ್ಕನ್ನು ನನ್ನ ಇಚ್ಛೆಯಂತೆ ಚಲಾಯಿಸಿರುವೆ. “ನಮ್ಮ ಮತವನ್ನು ಯಾರಿಗೆ ಬೇಕಾದರೂ ಚಲಾಯಿಸುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ’’ ಎಂದು ಸಮೀನಾ.ಬಿ ತಿಳಿಸಿದ್ದಾರೆ.







