ಮೋದಿ ರಾಷ್ಟ್ರಧ್ವಜಾರೋಹಣ ತಡೆಯಲು ಸಿಖ್ ಸೈನಿಕರಿಗೆ ಕರೆ ಆರೋಪ: ಪನ್ನೂನ್ ವಿರುದ್ಧ ಪ್ರಕರಣ ದಾಖಲು

ಹೊಸದಿಲ್ಲಿ: ಸಿಕ್ಖ್ ಸೈನಿಕರು ಆಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡುವುದನ್ನು ತಡೆಯಬೇಕು ಎಂದು ಕರೆ ನೀಡಿದ್ದ ಸಿಖ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸಂಘಟನೆಯ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಪ್ರಕರಣ ದಾಖಲಿಸಿಕೊಂಡಿದೆ. ಧ್ವಜಾರೋಹಣ ತಡದರೆ 11 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪನ್ನೂನ್ ಆಮಿಷವೊಡ್ಡಿದ್ದರು.
"ವಿಶ್ವಾಸಾರ್ಹ" ಮಾಹಿತಿ ಹಾಗೂ ಅಮೆರಿಕದ ಎಸ್ ಜೆಎಫ್ ಸಂಘಟನೆಯ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ 2025ರ ಆಗಸ್ಟ್ 10ರಂದು ಪೋಸ್ಟ್ ಮಾಡಿದ ವಿಡಿಯೊ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಜತೆಗೆ ಪನ್ನೂನ್ ಪಂಜಾಬ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲ ಭಾಗಗಳು ಸೇರಿರುವ ನಕ್ಷೆಯನ್ನು ಕೂಡಾ ಅನಾವರಣ ಮಾಡಿದ್ದು, ಇದು ಖಲಿಸ್ತಾನ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.
ಭಾರತದ ವಿರುದ್ಧ ಎಸ್ಎಫ್ ಜೆ ಶಹೀಜ್ ಜಾಥಾ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದ್ದನ್ನು ಎನ್ಐಎ ಉಲ್ಲೇಖಿಸಿದ್ದು, ದೇಶದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಭಾರತದ ಭದ್ರತೆಗೆ ಅಡ್ಡಿಪಡಿಸುವ ಮತ್ತು ಸಿಖ್ಖರಲ್ಲಿ ಭಾರತ ವಿರೋಧಿ ಭಾವನೆಗಳನ್ನು ಬೆಳೆಸುವ ಚಟುವಟಿಕೆಗಳಲ್ಲಿ ತೊಡಗಿದ್ದಾಗಿ ಆಪಾದಿಸಿದೆ. ಈ ಅಪರಾಧಗಳು ಎನ್ಐಎ ಕಾಯ್ದೆಯಡಿ ಬರುವುದಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕಿದೆ ಎನ್ನುವುದು ಕೇಂದ್ರದ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದೆ.
ಪನ್ನೂನ್ ಆಗಸ್ಟ್ 10ರಂದು ಪಾಕಿಸ್ತಾನದ ಲಾಹೋರ್ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದವನ್ನೂ ನಡೆಸಿದ ಸುಳಿವು ಕೇಂದ್ರ ಸರ್ಕಾರಕ್ಕೆ ಸಿಕ್ಕಿದೆ ಎಂದು ಎಫ್ಐಆರ್ ಹೇಳಿದೆ. ವಾಷಿಂಗ್ಟನ್ ನಿಂದ ವಿಡಿಯೊ ಲಿಂಕ್ ಮೂಲಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಎನ್ನಲಾಗಿದೆ. ಪಂಜಾಬ್ನ ಮೇಲೆ ಭಾರತದ ಸಾರ್ವಭೌಮತ್ವವನ್ನು ವಿರೋಧಿಸಿ ಖಲಿಸ್ತಾನದ ಪರ ದನಿ ಎತ್ತಿದ್ದ ಎಂದು ಆಪಾದಿಸಲಾಗಿದೆ.







