ಹಿಂದೂ ಧಾರ್ಮಿಕ ಮೆರವಣಿಗೆ ಮೇಲೆ ಉಗುಳಿದ ಆರೋಪ; ಯುವಕನಿಗೆ 151 ದಿನಗಳ ಬಳಿಕ ಜಾಮೀನು
ಪ್ರತಿಕೂಲ ಹೇಳಿಕೆಗಳನ್ನು ನೀಡಿದ ದೂರುದಾರ ಹಾಗೂ ಸಾಕ್ಷಿದಾರ ► “ಪೊಲೀಸರು ಸಿದ್ಧ ದೂರಿನ ಮೇಲೆ ತಮ್ಮ ಸಹಿ ಪಡೆದಿದ್ದರು”

Photo: article-14.com
ಭೋಪಾಲ: ಕಳೆದ ವರ್ಷದ ಜುಲೈನಲ್ಲಿ ಉಜ್ಜಯಿನಿ ನಗರದಲ್ಲಿ ನಡೆದಿದ್ದ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಉಗುಳಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಹದಿಹರೆಯದ ಬಾಲಕನಿಗೆ ಕೊನೆಗೂ 151 ದಿನಗಳ ಬಳಿಕ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಜಾಮೀನು ಲಭಿಸಿದೆ ಎಂದು article-14.com ವರದಿ ಮಾಡಿದೆ.
ಅದ್ನಾನ್ ಮನ್ಸೂರಿ (18) ಮತ್ತು ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ಮನೆಯ ಛಾವಣಿಯಿಂದ ಮೆರವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿ ಉಗುಳಿದ್ದರು ಎಂದು ಸಾವನ್ ಲೋಟ್ ಎಂಬ ವ್ಯಕ್ತಿ ಪೋಲಿಸ್ ದೂರನ್ನು ಸಲ್ಲಿಸಿದ್ದ. ಎರಡೇ ದಿನಗಳಲ್ಲಿ ನಗರಸಭಾ ಅಧಿಕಾರಿಗಳು ಅದ್ನಾನ್ ತಂದೆ ಅಷ್ರಫ್ ಹುಸೇನ್ ಮನ್ಸೂರಿ ಅವರಿಗೆ ಸೇರಿದ್ದ ಮೂರು ಅಂತಸ್ತುಗಳ ಕಟ್ಟಡವನ್ನು ನೆಲಸಮಗೊಳಿಸಿದ್ದರು.
ಲೋಟ್ ದೂರಿನ ಮೇರೆಗೆ ಪೋಲಿಸರು ಜು.18ರಂದು ಅದ್ನಾನ್ ಹಾಗೂ ಅಪ್ರಾಪ್ತ ವಯಸ್ಕರಾದ ಆತನ ಸೋದರ ಮತ್ತು ಸ್ನೇಹಿತನನ್ನು ಬಂಧಿಸಿದ್ದರು.
ಐದು ತಿಂಗಳುಗಳ ಬಳಿಕ 2023,ಡಿ.15ರಂದು ದೂರುದಾರ ಲೋಟ್ ಮತ್ತು ಆತನ ಸ್ನೇಹಿತ ಹಾಗೂ ಸಾಕ್ಷಿ ಅಜಯ ಖತ್ರಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ ಪೀಠದ ಮುಂದೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ. ಆರೋಪಿಗಳನ್ನು ತಾವು ಗುರುತಿಸಿರಲಿಲ್ಲ, ಅವರು ಮೆರವಣಿಗೆಯ ಮೇಲೆ ಉಗುಳಿದ್ದನ್ನೂ ತಾವು ನೋಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಪೊಲೀಸರು ಸಿದ್ಧ ದೂರಿನ ಮೇಲೆ ತಮ್ಮ ಸಹಿ ಪಡೆದಿದ್ದರು ಎಂದು ಅವರು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.
ಅವರ ಹೇಳಿಕೆಗಳ ಆಧಾರದಲ್ಲಿ ನ್ಯಾಯಾಲಯವು ಅದ್ನಾನ್ ಗೆ ಜಾಮೀನು ಮಂಜೂರು ಮಾಡಿದೆ. ಅಲ್ಲಿಯವರೆಗೆ ಅದ್ನಾನ್ ಜೈಲು ಸೇರಿ 151 ದಿನಗಳಾಗಿದ್ದವು.
ನ್ಯಾಯಾಲಯವು ಪ್ರಕರಣದಲ್ಲಿಯ ಅಂಶಗಳು ಮತ್ತು ಸಂದರ್ಭಗಳನ್ನು ಪರಿಶೀಲಿಸಿದೆ, ಎರಡೂ ಕಡೆಗಳ ವಾದಗಳನ್ನು ಆಲಿಸಿದೆ. ದೂರುದಾರ ಸಾವನ್ ಲೋಟ್ ಮತ್ತು ಸಾಕ್ಷಿದಾರ ಅಜಯ ಖತ್ರಿ ಪ್ರತಿಕೂಲ ಹೇಳಿಕೆಗಳನ್ನು ದಾಖಲಿಸಿದ್ದನ್ನು ಮತ್ತು ಪ್ರಾಸಿಕ್ಯೂಷನ್ ವಾದವನ್ನು ಬೆಂಬಲಿಸದ್ದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆ ಎಂದು ನ್ಯಾ.ಅನಿಲ ವರ್ಮಾ ಅವರ ಏಕ ಸದಸ್ಯ ಪೀಠವು ತನ್ನ ಆದೇಶದಲ್ಲಿ ಹೇಳಿದೆ.
ಇದಕ್ಕೂ ಎರಡು ತಿಂಗಳು ಮೊದಲು,2023 ಸೆ.19ರಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ಪೀಠವು ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರು ಅಪ್ರಾಪ್ತ ವಯಸ್ಕರಿಗೆ ಜಾಮೀನು ನೀಡಿತ್ತು.







