ಉತ್ತರ ಪ್ರದೇಶ | ಪತ್ನಿಯ ಶೀಲ ಶಂಕಿಸಿ ಆಕೆ ಮತ್ತು ಪುತ್ರಿಯರ ಮೇಲೆ ಆ್ಯಸಿಡ್ ದಾಳಿ

ಶಾಹಜಾನ್ಪುರ: ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ವ್ಯಕ್ತಿಯೋರ್ವ ಆಕೆಯ ಮತ್ತು ತಮ್ಮಿಬ್ಬರ ಪುತ್ರಿಯರ ಮೇಲೆ ಆ್ಯಸಿಡ್ ಎರಚಿರುವ ಘಟನೆ ಇಲ್ಲಿಯ ಟಿಕ್ರಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು,ರಾಮಗುಣಿ(39), ಪುತ್ರಿಯರಾದ ರಚಿತಾ(23) ಮತ್ತು ನೇಹಾ(16) ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮಗುಣಿ ತನ್ನಿಬ್ಬರು ಪುತ್ರಿಯರು ಮತ್ತು ಪುತ್ರನೊಂದಿಗೆ ಟಿಕ್ರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ,ಆಕೆಯ ಪತಿ ರಾಮಗೋಪಾಲ್ ಶಹಾಬಾದ್ ಹರ್ದೋಯಿಯಲ್ಲಿ ವಾಸವಾಗಿದ್ದ. ಶುಕ್ರವಾರ ರಾತ್ರಿ ರಾಮಗುಣಿ ಮತ್ತು ಆಕೆಯ ಪುತ್ರಿಯರು ಗಾಢನಿದ್ರೆಯಲ್ಲಿದ್ದಾಗ ಗೋಡೆ ಹಾರಿ ಮನೆಯನ್ನು ಪ್ರವೇಶಿಸಿದ್ದ ರಾಮಗೋಪಾಲ್ ಅವರ ಮೇಲೆ ಆ್ಯಸಿಡ್ ಎರಚಿದ್ದಾನೆ ಎಂದು ಪೋಲಿಸರು ರವಿವಾರ ತಿಳಿಸಿದರು.
ಘಟನೆಯ ಸಂದರ್ಭ ರಾಮಗುಣಿಯ ಪುತ್ರ ಆಶು ತನ್ನ ಸ್ನೇಹಿತನೊಂದಿಗೆ ಉಳಿದುಕೊಂಡಿದ್ದ.
ದೂರಿನ ಪ್ರಕಾರ, ರಾಮಗೋಪಾಲ್ ಮದ್ಯವ್ಯಸನಿಯಾಗಿದ್ದು, ಅದಕ್ಕಾಗಿ ಶಹಾಬಾದ್ನಲ್ಲಿಯ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದ. ಬಳಿಕ ರಾಮಗುಣಿ ತನ್ನ ಮಕ್ಕಳೊಂದಿಗೆ ಟಿಕ್ರಿಗೆ ಸ್ಥಳಾಂತರಗೊಂಡಿದ್ದಳು. ಆದರೆ ಆಕೆಯ ಶೀಲದ ಬಗ್ಗೆ ಶಂಕೆಯನ್ನು ಹೊಂದಿದ್ದ ರಾಮಗೋಪಾಲ್ ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದ ಎಂದು ಪೋಲಿಸರು ತಿಳಿಸಿದರು.
ಆಶು ತನ್ನ ತಂದೆಯ ವಿರುದ್ಧ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಪರಾರಿಯಾಗಿರುವ ರಾಮಗೋಪಾಲ್ ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.







