ನಟ, ನಿರ್ಮಾಪಕ ಕಮಾಲ್ ಆರ್. ಖಾನ್ ಬಂಧನ
ನಾನೇನಾದರೂ ಮೃತಪಟ್ಟರೆ ಅದನ್ನು ಕೊಲೆ ಎಂದೇ ತಿಳಿಯಿರಿ ಎಂದ ನಟ

ಕಮಾಲ್ ಆರ್. ಖಾನ್ | Photo: Twitter
ಮುಂಬೈ: 2016ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಚಿತ್ರ ನಿರ್ಮಾಪಕ ಕಮಾಲ್ ಆರ್. ಖಾನ್ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಈ ವಿಷಯವನ್ನು ಸ್ವತಃ ಕಮಾಲ್ ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ತಾನು ದುಬೈಗೆ ತೆರಳುವಾಗ, ಮುಂಬೈ ವಿಮಾನ ನಿಲ್ದಾಣದ ಬಳಿ ನನ್ನನ್ನು ಬಂಧಿಸಲಾಯಿತು ಎಂದು ಕಮಾಲ್ ಖಾನ್ ಬರೆದುಕೊಂಡಿದ್ದಾರೆ.
“ನಾನು ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ವಾಸಿಸುತ್ತಿದ್ದೇನೆ ಮತ್ತು ನಾನು ನನ್ನ ಎಲ್ಲ ನ್ಯಾಯಾಲಯಗಳ ದಿನಾಂಕಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದೇನೆ. ಇಂದು ನಾನು ಹೊಸ ವರ್ಷದ ನಿಮಿತ್ತ ದುಬೈಗೆ ತೆರಳುತ್ತಿದ್ದೆ. ಆದರೆ, ಮುಂಬೈ ಪೊಲೀಸರು ನನ್ನನ್ನು ವಿಮಾನ ನಿಲ್ದಾಣದ ಬಳಿ ಬಂಧಿಸಿದರು. ಪೊಲೀಸರ ಪ್ರಕಾರ, ನಾನು 2016ರ ಪ್ರಕರಣದಲ್ಲಿ ಬೇಕಾಗಿದ್ದೇನೆ. ‘ಟೈಗರ್ 3’ ಸಿನಿಮಾ ವಿಫಲವಾಗಲು ನಾನು ಕಾರಣ ಎಂದು ಸಲ್ಮಾನ್ ಖಾನ್ ಹೇಳುತ್ತಿದ್ದಾರೆ. ನಾವು ಯಾವುದೇ ಪರಿಸ್ಥಿತಿಯಲ್ಲಿ ಪೊಲೀಸ್ ಠಾಣೆ ಅಥವಾ ಜೈಲಿನಲ್ಲಿ ಮೃತಪಟ್ಟರೆ ನೀವೆಲ್ಲ ಅದನ್ನು ಕೊಲೆ ಎಂದೇ ತಿಳಿಯಬೇಕು. ಮತ್ತು ಅದಕ್ಕೆ ಯಾರು ಹೊಣೆ ಎಂಬುದು ನಿಮಗೆಲ್ಲ ತಿಳಿದೇ ಇದೆ!” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ 2022ರಲ್ಲಿ ಕಮಾಲ್ ಖಾನ್ ಬಂಧನಕ್ಕೊಳಗಾಗಿದ್ದಾರೆ. ವಾಸ್ತವವಾಗಿ, 2022ರಲ್ಲಿ ಅವರು ಎರಡು ಬಾರಿ ಬಂಧನಕ್ಕೊಳಗಾಗಿದ್ದರು. ದಿವಂಗತ ನಟರಾದ ಇರ್ಫಾನ್ ಹಾಗೂ ರಿಷಿ ಕಪೂರ್ ಕುರಿತು ಮಾಡಿದ ವಿವಾದಾತ್ಮಕ ಟ್ವೀಟ್ ಗಳಿಗಾಗಿ ಅವರು ಮೊದಲು ಬಂಧನಕ್ಕೊಳಗಾಗಿದ್ದರು. ಇದಾದ ನಂತರ, ದೈಹಿಕ ತರಬೇತುದಾರರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅವರು ಮತ್ತೆ ಬಂಧನಕ್ಕೊಳಗಾಗಿದ್ದರು.





