“ನನ್ನನ್ನು ವಂಚಿಸಿದ ವ್ಯಕ್ತಿಗೆ ಪಕ್ಷದ ಮುಖಂಡರಿಂದ ಬೆಂಬಲ”: ಬಿಜೆಪಿ ತೊರೆದ ನಟಿ ಗೌತಮಿ

ನಟಿ ಗೌತಮಿ ತಡಿಮಲ್ಲ (Photo:X)
ಚೆನ್ನೈ: ನಟಿ, ರಾಜಕಾರಣಿ ಗೌತಮಿ ತಡಿಮಲ್ಲ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ತನಗೆ ವಿಶ್ವಾಸದ್ರೋಹಗೈದು ವಂಚಿಸಿದ ವ್ಯಕ್ತಿಗೆ ಬಿಜೆಪಿ ನಾಯಕರು ಸಹಾಯ ಮಾಡುತ್ತಿರುವುದರಿಂದ ತಮಗೆ ಅತೀವ ದುಃಖವಾಗಿದೆ ಈ ಕಾರಣದಿಂದಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
“ನಾನು ಇಂದು ಬದುಕಿನ ಊಹಿಸಲಾಗದ ಬಿಕ್ಕಟ್ಟಿನ ಸನ್ನಿವೇಶದಲ್ಲಿದ್ದೇನೆ, ಪಕ್ಷದಿಂದ ಹಾಗೂ ಅದರ ನಾಯಕರಿಂದ ಬೆಂಬಲ ನನಗಿಲ್ಲ, ಅಷ್ಟೇ ಅಲ್ಲದೆ ಅವರಲ್ಲಿ ಹಲವರು ನನ್ನನ್ನು ವಂಚಿಸಿದ ಹಾಗೂ ನನ್ನ ಜೀವಮಾನದ ಉಳಿತಾಯವನ್ನು ಸೆಳೆದ ವ್ಯಕ್ತಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆಂಬುದು ನನ್ನ ಗಮನಕ್ಕೆ ಬಂದಿದೆ,” ಎಂದು ಅವರು ಬರೆದಿದ್ದಾರೆ.
ಗೌತಮಿ ಅವರು ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ತಮ್ಮ ಟ್ವೀಟ್ನಲ್ಲಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರನ್ನು ಟ್ಯಾಗ್ ಮಾಡಿದ್ದಾರೆ. ತಮ್ಮ ರಾಜೀನಾಮೆ ನಿರ್ಧಾರ ದುಃಖದಿಂದ ಕೂಡಿದೆಯಾದರೂ ದೃಢವಾಗಿದೆ ಎಂದು ಅವರು ಹೇಳಿದ್ದಾರಲ್ಲದೆ ತಮ್ಮನ್ನು ವಂಚಿಸಿದ ವ್ಯಕ್ತಿ ಸಿ ಅಲಗಪ್ಪನ್ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
“20 ವರ್ಷಗಳ ಹಿಂದೆ ನನ್ನ ದುರ್ಬಲತೆಯ ಲಾಭವನ್ನು ಅವರು ಪಡೆದಿದ್ದರು, ನಾನು ಆಗಷ್ಟೇ ನನ್ನ ಹೆತ್ತವರನ್ನೂ ಕಳೆದುಕೊಂಡು ಅನಾಥೆಯಾಗಿದ್ದ ಹಾಗೂ ಪುಟ್ಟ ಮಗುವೊಂದರ ಒಂಟಿ ತಾಯಿಯಾಗಿದ್ದ ಸಂದರ್ಭ ಅವರು ನನ್ನನ್ನು ನೋಡಿಕೊಳ್ಳುವ ಭರವಸೆಯೊಂದಿಗೆ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ನನಗೆ ಹತ್ತಿರವಾಗಿಸಿದ್ದರು. ನನ್ನ ಹಲವು ಜಮೀನುಗಳ ದಾಖಲೆಯನ್ನು ಅವರಿಗೆ ನೀಡಿ ಅವುಗಳ ಮಾರಾಟದ ಜವಾಬ್ದಾರಿ ನೀಡಿದ್ದೆ. ಆದರೆ ಅವರ ವಂಚನೆ ಇತ್ತೀಚೆಗಷ್ಟೇ ನನ್ನ ಗಮನಕ್ಕೆ ಬಂತು, ಇಷ್ಟು ಸಮಯ ನನ್ನನ್ನು ಮತ್ತು ನನ್ನ ಮಗಳನ್ನು ಅವರ ಕುಟುಂಬದಂತೆ ಎಂದು ತೋರ್ಪಡಿಸುವ ಯತ್ನ ಮಾಡಿದ್ದರು,” ಎಂದು ಗೌತಮಿ ಬರೆದಿದ್ದಾರಲ್ಲದೆ ಏಕಾಂಗಿಯಾಗಿ ತಾವು ನ್ಯಾಯಕ್ಕಾಗಿ ಹೋರಾಡುತ್ತಿರುವುದಾಗಿಯೂ ಹೇಳಿದ್ದಾರೆ.







