ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಆರೋಪ: ‘ಧುರಂಧರ್’ ನಟ ನದೀಮ್ ಖಾನ್ ಬಂಧನ

Photo|newindianexpres
ಮುಂಬೈ,ಜ.26: ‘ಧುರಂಧರ್’ ಚಿತ್ರ ನಟ ನದೀಮ್ ಖಾನ್ ಅವರನ್ನು, ಮನೆಕೆಲಸದ ಮಹಿಳೆಗೆ ಮದುವೆಯ ಸುಳ್ಳು ಭರವಸೆ ನೀಡಿ ಸುಮಾರು 10 ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
41 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಟನನ್ನು ಬಂಧಿಸಲಾಗಿದೆ. ನಟ ಮದುವೆಯಾಗುವುದಾಗಿ ಭರವಸೆ ನೀಡಿದ್ದರಿಂದಲೇ ತಾನು ಅವರೊಂದಿಗೆ ದೈಹಿಕ ಸಂಬಂಧಕ್ಕೆ ಒಪ್ಪಿಕೊಂಡಿದ್ದೆ. ಆದರೆ, ನಂತರ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಬೇಕಾಯಿತು ಎಂದು ಮಹಿಳೆ ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ದೂರುದಾರರು 2015ರಲ್ಲಿ ನದೀಮ್ ಖಾನ್ ಅವರ ಮನೆಯಲ್ಲಿ ಮನೆಕೆಲಸದವರಾಗಿ ಕೆಲಸ ಆರಂಭಿಸಿದ್ದರು. ಈ ಅವಧಿಯಲ್ಲಿ ಇಬ್ಬರ ನಡುವೆ ಪರಿಚಯ ಬೆಳೆದು, ಮದುವೆಯ ಭರವಸೆಯ ಆಧಾರದ ಮೇಲೆ ದೈಹಿಕ ಸಂಬಂಧ ಮುಂದುವರಿದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆಪಾದಿತ ಘಟನೆಗಳು ಮಾಲ್ವಾನಿ ಪ್ರದೇಶದಲ್ಲಿರುವ ನಟನ ಮನೆಯಲ್ಲಿ ನಡೆದಿರುವುದರಿಂದ, ಪ್ರಕರಣವನ್ನು ವರ್ಸೋವಾ ಪೊಲೀಸ್ ಠಾಣೆಯಿಂದ ಮಾಲ್ವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಆರಂಭದಲ್ಲಿ ವರ್ಸೋವಾ ಪೊಲೀಸರು ಶೂನ್ಯ ಎಫ್ಐಆರ್ ದಾಖಲಿಸಿ ಮುಂದಿನ ತನಿಖೆಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.
“ಮಹಿಳೆಯ ಹೇಳಿಕೆಯ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







