ಅಭಿಮಾನಿ ಬಾಲಕನಿಗೆ ಹೊಡೆದು, ಬಳಿಕ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್

ನಟ ನಾನಾ ಪಾಟೇಕರ್ | Photo: ANI
ಲಕ್ನೋ: ವಾರಣಾಸಿಯಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಅವರು ಅಭಿಮಾನಿ ಬಾಲಕನೋರ್ವನ ತಲೆಗೆ ಹೊಡೆದಿರುವ ವೀಡಿಯೊ ವ್ಯಾಪಕ ವೈರಲ್ ಆಗಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಂತರ ನಾನಾ ಪಾಟೇಕರ್ ಕ್ಷಮೆ ಕೋರಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ ಚಿತ್ರದ ನಂತರ ನಾನಾ ಪಾಟೇಕರ್ ಅವರ ಮುಂದಿನ ಚಿತ್ರ ‘ಜರ್ನಿ’ಯ ಚಿತ್ರೀಕರಣ ವಾರಣಾಸಿಯಲ್ಲಿ ನಡೆಯುತ್ತಿತ್ತು. ಈ ಸಂದರ್ಭ ಅಭಿಮಾನಿ ಬಾಲಕನೊಬ್ಬ ನಾನಾ ಪಾಟೇಕರ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದ. ಇದರಿಂದ ಏಕಾಏಕಿ ಕೋಪಗೊಂಡ ನಾನಾ ಪಾಟೇಕರ್ ಆ ಬಾಲಕನ ತಲೆಗೆ ಹೊಡೆದಿದ್ದಾರೆ. ಸೆಟ್ ನಲ್ಲಿದ್ದ ಇನ್ನೋರ್ವ ಸಿಬ್ಬಂದಿ ಹುಡುಗನನ್ನು ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ.
ಈ ಘಟನೆಯ 10 ಸೆಕೆಂಡ್ ಗಳ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ನಾನಾ ಪಾಟೇಕರ್ ಕ್ಷಮೆ ಕೋರಿದ್ದಾರೆ.
ತಾನು ಚಿತ್ರೀಕರಣ ನಡೆಸುತ್ತಿರುವ ಚಿತ್ರದಲ್ಲಿ ಹೊಡೆಯುವ ಘಟನೆ ಭಾಗವಾಗಿತ್ತು. ದೃಶ್ಯದ ರಿಹರ್ಸಲ್ ನಡೆಯುತ್ತಿರುವಾಗ ಈ ಬಾಲಕ ಬಂದ. ಆತ ನಮ್ಮ ತಂಡದವನೇ ಎಂದು ಭಾವಿಸಿ ಹೊಡೆದೆ. ಆದರೆ, ಆತ ಬೇರೆ ಯಾರೋ ಆಗಿದ್ದಾನೆ ಎಂದು ನನಗೆ ಬಳಿಕ ತಿಳಿಯಿತು. ನಾನು ಕ್ಷಮೆ ಕೇಳಲು ಪ್ರಯತ್ನಿಸಿದೆ. ಆದರೆ, ಆತ ಭಯದಿಂದ ಓಡಿ ಹೋಗಿದ್ದ ಎಂದು ನಾನಾ ಪಾಟೇಕರ್ ತಿಳಿಸಿದ್ದಾರೆ.







