ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿ ಕ್ಷಮೆ ಯಾಚಿಸಿದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ | Photo Credit : PTI
ಹೈದರಾಬಾದ್: "ಇಂತಹ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ" ಎಂದು ಆನ್ಲೈನ್ ಬೆಟ್ಟಿಂಗ್ ಆ್ಯಪ್ ಪರ ಪ್ರಚಾರಕ್ಕೆ ಸಂಬಂಧಿಸಿ ಬಹುಭಾಷಾ ನಟ ನಟ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ.
ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ, ಹೈದರಾಬಾದ್ ನ ಸಿಐಡಿ ಕಚೇರಿಯಲ್ಲಿ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, “ತಿಳಿದೋ, ತಿಳಿಯದೆಯೋ ನಾನು ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಪ್ರಚಾರದಲ್ಲಿ ಭಾಗಿಯಾಗಿದ್ದು, ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ನಾನು ನನ್ನ ಎಲ್ಲಾ ದಾಖಲೆಗಳು, ಬ್ಯಾಂಕ್ ಸ್ಟೇಟ್ ಮೆಂಟ್ ಗಳು ಹಾಗೂ ಸೂಕ್ತ ವಿವರಗಳನ್ನು ವಿಶೇಷ ತನಿಖಾ ತಂಡಕ್ಕೆ ಸಲ್ಲಿಸಿದ್ದೇನೆ" ಎಂದು ಹೇಳಿದರು.
“ನನಗೂ ಬೆಟ್ಟಿಂಗ್ ಆ್ಯಪ್ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ನಾನು 2016ರಲ್ಲಿ ಗೇಮಿಂಗ್ ಆ್ಯಪ್ ಒಂದನ್ನು ಪ್ರಚಾರ ಮಾಡಿದ್ದೆ. ಆದರೆ, ಆ ಬಳಿಕ ಅದು ಬೆಟ್ಟಿಂಗ್ ಆ್ಯಪ್ ಆಗಿ ರೂಪಾಂತರಗೊಂಡಿತ್ತು. ಅದರ ಸ್ವರೂಪವನ್ನು ಅರ್ಥ ಮಾಡಿಕೊಂಡ ನಂತರ, ನಾನು ಆ ಜಾಹೀರಾತಿನಿಂದ ಹಿಂದೆ ಸರಿದೆ ಹಾಗೂ ಗುತ್ತಿಗೆಯನ್ನು ವಜಾಗೊಳಿಸಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಹಲವಾರು ಯುವಕರು ಹಣ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಅವರ ಕುಟುಂಬಗಳು ಸಮಸ್ಯೆಯನ್ನು ಎದುರಿಸುತ್ತಿದೆ. ಕೇವಲ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಮತ್ತು ಹಣ ಗಳಿಕೆ ಸಾಧ್ಯ. ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿಬಿಡಿ. ಇಂತಹ ತಪ್ಪನ್ನು ನಾನು ಪುನರಾವರ್ತಿಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಅಕ್ರಮ ಬೆಟ್ಟಿಂಗ್ ದಂಧೆಗಳನ್ನು ಮಟ್ಟ ಹಾಕಲು ಹಾಗೂ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣಗಳ ಕುರಿತು ಆಳವಾದ ತನಿಖೆ ನಡೆಸಲು ತೆಲಂಗಾಣ ಸರಕಾರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಈ ಬೆಟ್ಟಿಂಗ್ ಆ್ಯಪ್ ವೇದಿಕೆಗಳಲ್ಲಿ ಹಣ ಕಳೆದುಕೊಂಡ ಹಲವಾರು ಯುವಕರು ಅತಿರೇಕದ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಪೊಲೀಸ್ ದೂರುಗಳ ಹಿನ್ನೆಲೆಯಲ್ಲಿ ಈ ಕುರಿತ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು







