ಮಾದಕದ್ರವ್ಯ ಪ್ರಕರಣ | ನಟ ಶ್ರೀಕಾಂತ್ಗೆ ನ್ಯಾಯಾಂಗ ಕಸ್ಟಡಿ, ಪೊಲೀಸರಿಗೆ ಶರಣಾದ ಕೃಷ್ಣ

ನಟ ಶ್ರೀಕಾಂತ್ | PC : NDTV
ಚೆನ್ನೈ: ಮಾದಕದ್ರವ್ಯ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿರುವ ತಮಿಳು ನಟ ಶ್ರೀಕಾಂತ್ ಅವರನ್ನು ವಿಚಾರಣೆಗೊಳಪಡಿಸಲು ನ್ಯಾಯಾಲಯವು ಅವರಿಗೆ ಜುಲೈ 7ರವರೆಗೆ ನ್ಯಾಯಾಂಗ ಕಸ್ಟಡಿಯನ್ನು ವಿಧಿಸಿದೆ. ಅವರ ರಕ್ತದ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿಕೊಂಡಲಾಗಿದೆ.
ಶ್ರೀಕಾಂತ್ ಅವರ ಬಂಧನದ ಬೆನ್ನಲ್ಲೇ ಈ ಹಗರಣದಲ್ಲಿ ಇನ್ನೋರ್ವ ನಟ ಕೃಷ್ಣ ಶಾಮೀಲಾಗಿದ್ದಾರೆಂದು ಶಂಕಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದಲ್ಲಿ ತನ್ನ ಹೆಸರು ಹರಿದಾಡತೊಡಗಿದ ಬಳಿಕ ಸಂಪರ್ಕಕ್ಕೆ ಸಿಗದಿದ್ದ ಅವರು ಬುಧವಾರ ಚೆನ್ನೈ ಪೊಲೀಸರ ಮುಂದೆ ಶರಣಾಗಿದ್ದಾರೆ. ನಗರದ ನುಂಗಂಬಾಕಂ ಪೊಲೀಸ್ ಠಾಣೆಯಲ್ಲಿ 18 ತಾಸುಗಳಿಗೂ ಅಧಿಕ ಸಮಯದವರೆಗೆ ತನಿಖಾಧಿಕಾರಿಗಳು ಅವರ ವಿಚಾರಣೆ ನಡೆಸಿದ್ದಾರೆ. ವೀರಾ, ಕಳರಿ, ಮಾರಿ 2 ಹಾಗೂ ಕಳಗು 2 ಚಿತ್ರಗಳಲ್ಲಿನ ಅಭಿನಯದಿಂದ ಅವರು ಜನಪ್ರಿಯರಾಗಿದ್ದರು. ಕೊಕೇನ್ ಮಾದಕದ್ರವ್ಯ ಖರೀದಿ ಹಾಗೂ ಸೇವನೆ ಪ್ರಕರಣದಲ್ಲಿ ಶ್ರೀಕಾಂತ್ ಆರೋಪಿಯಾಗಿದ್ದಾರೆ.
ಚೆನ್ನೈನಲ್ಲಿರುವ ಕೃಷ್ಣ ಅವರ ನಿವಾಸಕ್ಕೆ ಗುರುವಾರ ಬೆಳಗ್ಗೆ ಆಗಮಿಸಿದ ಪೊಲೀಸರು, ಶೋಧಕಾರ್ಯಾಚರಣೆ ನಡೆಸಿದ್ದಾರೆ. ಆದಾಗ್ಯೂ ತನಿಖಾಧಿಕಾರಿಗಳು ಯಾವುದೇ ಮಹತ್ವದ ಉರಾವೆಗಳು ಲಭಿಸಿಲ್ಲವೆಂದು ತಿಳಿದುಬಂದಿದೆ. ಈ ಮಧ್ಯೆ ತಮಿಳುಚಿತ್ರರಂಗದ ಇನ್ನಿಬ್ಬರು ಜನಪ್ರಿಯ ನಟಿಯರು ಕೂಡಾ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಇನ್ನೂ ಹಲವು ಪ್ರಮುಖರ ಹೆಸರುಗಳು ಕೇಳಿಬರುತ್ತಿದೆ ಎನ್ನಲಾಗಿದೆ.





