ನಟ ವಿಜಯ್ ಅವರ ಟಿವಿಕೆ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ: ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಚುನಾವಣಾ ಆಯೋಗ ಮಾಹಿತಿ

ನಟ ವಿಜಯ್ | Photo Credi : PTI
ಚೆನ್ನೈ, ಅ. 17: ಜನಪ್ರಿಯ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ ಎಂದು ಚುನಾವಣಾ ಆಯೋಗ ಶುಕ್ರವಾರ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ)ನ ಮಾನ್ಯತೆ ರದ್ದುಗೊಳಿಸುವಂತೆ ಕೋರಿ ಸಿ. ಸೆಲ್ವ ಕುಮಾರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಂ.ಎಂ. ಶ್ರೀವಾತ್ಸವ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನು ಒಳಗೊಂಡ ಪ್ರಥಮ ಪೀಠ ವಿಚಾರಣೆ ನಡೆಸಿತು. ಈ ಸಂದರ್ಭ ಚುನಾವಣಾ ಆಯೋಗದ ವಕೀಲ ನಿರಂಜನ ರಾಜಗೋಪಾಲ್ ಅವರು ಈ ಹೇಳಿಕೆ ನೀಡಿದರು.
ಸೆಪ್ಟಂಬರ್ 27ರಂದು ಕರೂರ್ ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಟಿವಿಕೆಯನ್ನು ರದ್ದುಗೊಳಿಸುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ.
ಸೆಪ್ಟಂಬರ್ 27ರ ಕರೂರು ಕಾಲ್ತುಳಿತದ ಕುರಿತಾದ ಎಲ್ಲಾ ಪ್ರಕರಣಗಳನ್ನು ಉಚ್ಚ ನ್ಯಾಯಾಲಯದ ಆಡಳಿತಾತ್ಮಕ ವಿಭಾಗಕ್ಕೆ ಕಳುಹಿಸಿ ಎಂದು ಪೀಠ ರಿಜಿಸ್ಟ್ರಿಗೆ ನಿರ್ದೇಶಿಸಿದೆ. ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ಪೀಠ ರಚಿಸಬೇಕು ಎಂದು ಕೂಡ ಅದು ಹೇಳಿದೆ.
ಟಿವಿಕೆ ಮಾನ್ಯತೆ ಪಡೆದ ಪಕ್ಷವಲ್ಲ. ಆದುದರಿಂದ ಅದರ ಮಾನ್ಯತೆ ರದ್ದುಗೊಳಿಸುವ ವಿನಂತಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ನಿರಂಜನ್ ರಾಜಗೋಪಾಲ್ ಹೇಳಿದರು.
ಈ ಅರ್ಜಿಯನ್ನು ಮೊದಲು ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠಕ್ಕೆ ಸಲ್ಲಿಸಲಾಗಿತ್ತು. ಆದರೆ, ಪ್ರತಿವಾದಿ ಮುಖ್ಯ ಚುನಾವಣಾಧಿಕಾರಿ ಆಗಿದ್ದುದರಿಂದ ಅನಂತರ ಈ ಅರ್ಜಿಯನ್ನು ಉಚ್ಚ ನ್ಯಾಯಾಲಯದ ಪ್ರಥಮ ಪೀಠಕ್ಕೆ ವರ್ಗಾಯಿಸಲಾಯಿತು.







