‘ನನ್ನ ಪುತ್ರಿ ಧೈರ್ಯವಂತೆ, ಕರುಣಾಮಯಿʼ ; ನಟ ವಿಜಯ್ ಆ್ಯಂಟನಿ ಭಾವನಾತ್ಮಕ ಹೇಳಿಕೆ
ತಮ್ಮ ಪುತ್ರಿಯ ಸ್ಮರಣಾರ್ಥ ದತ್ತಿ ನಿಧಿ ಸ್ಥಾಪಿಸುತ್ತಿರುವ ನಟ

ತಮಿಳು ನಟ ಹಾಗೂ ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ Photo: vijayantony/instagram
ಚೆನ್ನೈ: ಇತ್ತೀಚೆಗಷ್ಟೆ ತಮ್ಮ 16 ವರ್ಷದ ಪುತ್ರಿಯನ್ನು ಅಗಲಿಕೆಯ ಆಘಾತದಲ್ಲಿರುವ ತಮಿಳು ನಟ ಹಾಗೂ ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ, ತಮ್ಮ ಮೃತ ಪುತ್ರಿಯ ಸ್ಮರಣಾರ್ಥ ದತ್ತಿ ನಿಧಿ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ. ಈ ಕುರಿತು ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, “ನನ್ನ ಪುತ್ರಿ ತುಂಬಾ ಕರುಣಾಮಯಿ, ಧೈರ್ಯವಂತೆ. ಆಕೆಯೀಗ ಜಾತಿ, ಧರ್ಮ, ಹಣ, ಅಸೂಯೆ, ನೋವು, ಹಿಂಸೆ ಅಥವಾ ಬಡತನವಿಲ್ಲದ, ಉತ್ತಮವಾದ ಮತ್ತೊಂದು ಲೋಕಕ್ಕೆ ತೆರಳಿದ್ದಾಳೆ. ಆಕೆಯೀಗಲೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ. ನಾನೂ ಕೂಡಾ ಆಕೆಯೊಂದಿಗೆ ಮೃತಪಟ್ಟಿದ್ದೇನೆ. ನಾನೀಗ ಆಕೆಯೊಂದಿಗೆ ಹೆಚ್ಚು ಸಮಯವನ್ನು ಕಳೆಯಲಿದ್ದೇನೆ. ಆಕೆಯ ಹೆಸರಲ್ಲಿ ನಾನು ಮಾಡಲಿರುವ ಉತ್ತಮ ಕೆಲಸಗಳನ್ನು ಆಕೆ ಅನಾವರಣಗೊಳಿಸಲಿದ್ದಾಳೆ” ಎಂದು ವಿಜಯ್ ಆ್ಯಂಟನಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಸೆಪ್ಟೆಂಬರ್ 19ರಂದು ವಿಜಯ್ ಆ್ಯಂಟನಿಯವರ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಮರಣವನ್ನು ಹಲವಾರು ಮಾಧ್ಯಮ ಸಂಸ್ಥೆಗಳು ರೋಚಕವಾಗಿ ಬಿತ್ತರಿಸಿದ್ದವು. ಅಪ್ರಾಪ್ತ ಬಾಲಕಿಯಾಗಿದ್ದ ಆಕೆಯ ಭಾವಚಿತ್ರ, ಆಕೆಯ ಗುರುತು ಬಹಿರಂಗ, ವೈಯಕ್ತಿಕ ಬದುಕಿನ ಮೇಲೆ ದಾಳಿ ಹಾಗೂ ಮರಣದ ಕಾರಣ ಕುರಿತು ತನಿಖೆ ಸೇರಿದಂತೆ ಆಕೆಯ ಮರಣದ ಕುರಿತ ಮಾಧ್ಯಮ ಸಂಸ್ಥೆಗಳ ವಿವೇಚನಾರಹಿತ ವರದಿಗಾರಿಕೆ ವಿರುದ್ಧ ಹಲವರು ವಾಗ್ದಾಳಿ ನಡೆಸಿದ್ದರು.
ಇಂತಹ ವರದಿಗಾರಿಕೆ ವಿರುದ್ಧ ಎಚ್ಚರಿಕೆ ನೀಡಿದ್ದ ತಮಿಳುನಾಡು ಮಕ್ಕಳ ರಕ್ಷಣಾ ನಿಗಾ ಸಂಸ್ಥೆಯು, ಸುದ್ದಿ ವಾಹಿನಿಗಳು ಕಾನೂನು ಹಾಗೂ ಅಪ್ರಾಪ್ತ ಸಂತ್ರಸ್ತರು ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಅಡಿ ಯಾವುದೇ ಬಗೆಯ ದೌರ್ಜನ್ಯ ಅಥವಾ ಅಪರಾಧಕ್ಕೆ ಈಡಾದಾಗ, ಅಂತಹ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸಬಾರದು ಎಂಬ ವೃತ್ತಿಧರ್ಮದ ಕುರಿತು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿತ್ತು.







