ʼಕಾಸ್ಟಿಂಗ್ ಕೌಚ್ʼ ಆರೋಪ : ಮೌನ ಮುರಿದ ನಟ ವಿಜಯ್ ಸೇತುಪತಿ

ನಟ ವಿಜಯ್ ಸೇತುಪತಿ | PC : X
ಚೆನ್ನೈ : ತಮಿಳು ನಟ ವಿಜಯ್ ಸೇತುಪತಿ ತನ್ನ ಮೇಲೆ ಮಹಿಳೆಯೊಬ್ಬರು ಮಾಡಿದ ʼಕಾಸ್ಟಿಂಗ್ ಕೌಚ್ʼ ಆರೋಪವನ್ನು ನಿರಾಕರಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದ ಮಹಿಳೆ ಕಾಲಿವುಡ್, ಲೈಂಗಿಕ ದೌರ್ಜನ್ಯ, ನಶೆ, ಡ್ರಗ್ಸ್, ಕಾಸ್ಟಿಂಗ್ ಕೌಚ್ ಸೇರಿ ಹಲವು ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದರು. ನಟ ವಿಜಯ್ ಸೇತುಪತಿ 'ಕ್ಯಾರವಾನ್ ಫೇವರ್ಸ್'ಗಾಗಿ ಯುವತಿಯೊಬ್ಬಳನ್ನು ಶೋಷಿಸಿದ್ದರು ಎಂದು ಆರೋಪಿಸಿದ್ದರು. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದರು.
ನಟ ವಿಜಯ್ ಸೇತುಪತಿ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ಮಹಿಳೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಗೊತ್ತಿರುವವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂತಹ ಆರೋಪಗಳಿಂದ ನಮ್ಮ ಕುಟುಂಬ ಮತ್ತು ಸ್ನೇಹಿತರು ಅಸಮಾಧಾನಗೊಂಡಿದ್ದಾರೆ. ಆರೋಪಗಳನ್ನು ಮಾಡುವ ಮಹಿಳೆಯ ಗುರಿ ತಾತ್ಕಾಲಿಕ ಖ್ಯಾತಿಯಾಗಿದೆ. ಅವಳಿಗೆ ಕೆಲವು ನಿಮಿಷಗಳ ಖ್ಯಾತಿ ಸಿಕ್ಕಿದೆ, ಅವಳು ಅದನ್ನು ಆನಂದಿಸಲಿ. ಈ ಆರೋಪಗಳಿಗೆ ಸಂಬಂಧಿಸಿ ಸೈಬರ್ ಸೆಲ್ನಲ್ಲಿ ದೂರು ಕೂಡ ದಾಖಲಿಸಿದ್ದೇನೆ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ಇದೇ ರೀತಿಯ ಅಪಪ್ರಚಾರಗಳನ್ನು ಎದುರಿಸುತ್ತಿದ್ದೇನೆ. ಇಂತಹ ಆರೋಪಗಳು ಇದೇ ಮೊದಲಲ್ಲ. ಇಂತಹ ಆರೋಪಗಳು ನನ್ನ ಮೇಲೆ ಪರಿಣಾಮ ಬೀರಿಲ್ಲ ಮತ್ತು ಎಂದಿಗೂ ಪರಿಣಾಮ ಬೀರುವುದಿಲ್ಲ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ವಿಜಯ್ ಸೇತುಪತಿ ವಿರುದ್ಧ ರಮ್ಯಾ ಮೋಹನ್ ಹೆಸರಿನ ಎಕ್ಸ್ ಖಾತೆಯ ಮೂಲಕ ಮಹಿಳೆಯೊಬ್ಬರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಇದು ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ʼವಿಜಯ್ ನನಗೆ ಪರಿಚಿತವಾಗಿರುವ ಯುವತಿ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ. 'ಕ್ಯಾರವಾನ್ ಫೇವರ್ಸ್'ಗೆ 2 ಲಕ್ಷ ರೂ., 'ಡ್ರೈವ್'ಗೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಂತನಂತೆ ವರ್ತಿಸುತ್ತಿದ್ದಾರೆ' ಎಂದು ರಮ್ಯಾ ಮೋಹನ್ ಎಂಬ ಎಕ್ಸ್ ಬಳಕೆದಾರರು ಆರೋಪಿಸಿದ್ದರು.







