ಅದಾನಿ ಗ್ಯಾಗ್ ಆರ್ಡರ್ ಪ್ರಕರಣ | ನ್ಯೂಸ್ ಲಾಂಡ್ರಿ, ಪರಂಜೋಯ್ ಮೇಲ್ಮನವಿಗಳನ್ನು ವರ್ಗಾವಣೆ ಮಾಡುವುದಿಲ್ಲ: ದಿಲ್ಲಿ ನ್ಯಾಯಾಲಯದಿಂದ ಸ್ಪಷ್ಟನೆ

ಅದಾನಿ(PTI) , ಪ್ರರಂಜೋಯ್ ಗುಹಾ ಥಾಕುರ್ತಾ(Outlook India)
ಹೊಸದಿಲ್ಲಿ: ಅದಾನಿ ವಿರುದ್ಧ ವರದಿ ಮಾಡಬಾರದು ಎಂದು ದಿಲ್ಲಿ ನ್ಯಾಯಾಲಯವೊಂದು ನೀಡಿದ್ದ ತಡೆಯಾಜ್ಞೆಯನ್ನು ಭಾಗಶಃ ತೆರವುಗೊಳಿಸಿದ್ದ ನ್ಯಾ. ಆಶಿಶ್ ಅಗರ್ವಾಲ್ ನ್ಯಾಯಪೀಠಕ್ಕೆ ಹಿರಿಯ ಪತ್ರಕರ್ತ ಪ್ರರಂಜೋಯ್ ಗುಹಾ ಥಾಕುರ್ತಾ ಹಾಗೂ ಡಿಜಿಟಲ್ ಸುದ್ದಿ ವೇದಿಕೆ ನ್ಯೂಸ್ ಲಾಂಡ್ರಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳನ್ನು ವರ್ಗಾಯಿಸಲಾಗುವುದಿಲ್ಲ ಎಂದು ಮಂಗಳವಾರ ರೋಹಿಣಿ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಸ್ಪಷ್ಟಪಡಿಸಿದ್ದು, ಅವರ ಮೇಲ್ಮನವಿಗಳನ್ನು ನ್ಯಾ. ಸುನೀಲ್ ಚೌಧರಿ ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದೆ ಎಂದು barandbench.com ವರದಿ ಮಾಡಿದೆ.
ಸೆಪ್ಟೆಂಬರ್ 24ರಂದು ಈ ಪ್ರಕರಣಗಳ ವಿಚಾರಣೆಯನ್ನು ನ್ಯಾ. ಸುನೀಲ್ ಚೌಧರಿ ನಡೆಸಲಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗುರ್ವಿಂದರ್ ಪಾಲ್ ಸಿಂಗ್ ಹೇಳಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಈ ಹಿಂದೆ ಈ ಪ್ರಕರಣದಲ್ಲಿ ಆದೇಶ ಹೊರಡಿಸಿರುವ ನ್ಯಾ. ಆಶಿಶ್ ಅಗರ್ವಾಲ್ ಅವರೇ ಈ ಪ್ರಕರಣಗಳ ವಿಚಾರಣೆಯನ್ನೂ ನಡೆಸುವುದು ಸೂಕ್ತ ಎಂದು ಸೋಮವಾರ ನ್ಯಾ. ಸುನೀಲ್ ಚೌಧರಿ ಅಭಿಪ್ರಾಯಪಟ್ಟಿದ್ದರು.
ಈ ಪ್ರಕರಣಗಳ ವಿಚಾರಣೆಯನ್ನು ವರ್ಗಾಯಿಸುವ ಸುನೀಲ್ ಚೌಧರಿಯವರ ನಿರ್ಧಾರದ ವಿಷಯವನ್ನು ಇಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೆದುರು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಇದರ ಬೆನ್ನಿಗೇ, ಪ್ರಕರಣಗಳ ವಿಚಾರಣೆಯನ್ನು ನ್ಯಾ. ಸುನೀಲ್ ಚೌಧರಿ ನಡೆಸುವುದರ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ನ್ಯೂಸ್ ಲಾಂಡ್ರಿ ಹಾಗೂ ಥಾಕುರ್ತಾ ಪರ ಹಾಜರಿದ್ದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ಪ್ರಕರಣಗಳ ವಿಚಾರಣೆಯನ್ನು ನ್ಯಾ. ಸುನೀಲ್ ಚೌಧರಿ ಅವರೇ ನಡೆಸಬೇಕು ಎಂಬ ತೀರ್ಮಾನ ಪ್ರಕಟಿಸಿದರು ಹಾಗೂ ಪ್ರಕರಣಗಳ ಮತ್ತೆ ನ್ಯಾ. ಸುನೀಲ್ ಚೌಧರಿ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ವರ್ಗಾಯಿಸಿದರು.
ಇದಕ್ಕೂ ಮುನ್ನ, ಸೆಪ್ಟೆಂಬರ್ 6ರಂದು ಈ ವಿಷಯದ ಕುರಿತು ಗ್ಯಾಗ್ ಆರ್ಡರ್ ಹೊರಡಿಸಿದ್ದ ರೋಹಿಣಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್, ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ವಿರುದ್ಧದ ಅವಹೇಳನಕಾರಿ ತುಣುಕುಗಳನ್ನು ತೆಗೆದು ಹಾಕಬೇಕು ಹಾಗೂ ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಕಂಪೆನಿಯ ಕುರಿತು ಪರಿಶೀಲನೆಯಾಗದ ಮತ್ತು ಅವಹೇಳನಕಾರಿ ಮಾಹಿತಿಗಳನ್ನು ಪ್ರಕಟಿಸುವುದರಿಂದ ದೂರ ಉಳಿಯಬೇಕು ಎಂದು ಪತ್ರಕರ್ತರಿಗೆ ನಿರ್ದೇಶನ ನೀಡಿದ್ದರು.







