ಗೂಗಲ್ ನ AI ಉದ್ಯಮದಲ್ಲಿ ಹೂಡಿಕೆ ಮಾಡಲಿರುವ ಅದಾನಿ ಸಂಸ್ಥೆ

ಗೌತಮ್ ಅದಾನಿ | Photo Credit : PTI
SUMMERY
ಅದಾನಿ ಎಂಟರ್ಪ್ರೈಸಸ್ ಮತ್ತು ಖಾಸಗಿ ಡಾಟಾ ಸೆಂಟರ್ ಆಪರೇಟರ್ ‘ಎಡ್ಜ್ಕನೆಕ್ಸ್’ನ ಜಂಟಿ ಉದ್ಯಮವಾಗಿರುವ ‘ಅದಾನಿ ಕನೆಕ್ಸ್’ ಸಂಸ್ಥೆ ಗೂಗಲ್ ಪ್ರೊಜೆಕ್ಟ್ನಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ
ಕೃತಕ ಬುದ್ಧಿಮತ್ತೆ ಅಥವಾ AI ರಂಗದ ತನ್ನ ಉದ್ಯಮವನ್ನು ವಿಸ್ತರಿಸಲು ಭಾರತದ ಅದಾನಿ ಸಂಸ್ಥೆ ನಿರೀಕ್ಷಿಸುತ್ತಿದೆ. ಇದೀಗ ಗೂಗಲ್ ಡಾಟಾ ಕೇಂದ್ರಕ್ಕೆ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.
ಆಲ್ಫಾಬೆಟ್ ಮಾಲೀಕತ್ವದಲ್ಲಿರುವ ಗೂಗಲ್ ನ ಇಂಡಿಯಾ AI ಡೇಟಾ ಸೆಂಟರ್ ಯೋಜನೆಯಲ್ಲಿ ಹೂಡಿಕೆ ಮಾಡುವ ಉದ್ದೇಶವಿದೆ ಎಂದು ಅದಾನಿ ಸಮೂಹದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಗೂಗಲ್ ಭಾರತದ ದಕ್ಷಿಣದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಕೃತಕ ಬುದ್ಧಿಮತ್ತೆಯ ಡಾಟಾ ಕೇಂದ್ರವನ್ನು ಸ್ಥಾಪಿಸಲು ಐದು ವರ್ಷಗಳ ಅವಧಿಯಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. AI ಹೂಡಿಕೆಗೆ ಅಗಾಧವಾದ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿದೆ. ಸಾವಿರಾರು ಚಿಪ್ ಗಳನ್ನು ಕ್ಲಸ್ಟರ್ಗಳಲ್ಲಿ ಲಿಂಕ್ ಮಾಡಲು ಅವಕಾಶ ಕೊಡುವ ವಿಶೇಷ ಡೇಟಾ ಸೆಂಟರ್ ಗಳ ಬೇಡಿಕೆ ಬರುತ್ತದೆ.
ಇದೀಗ ಅದಾನಿ ಎಂಟರ್ಪ್ರೈಸಸ್ ಮತ್ತು ಖಾಸಗಿ ಡಾಟಾ ಸೆಂಟರ್ ಆಪರೇಟರ್ ಎಡ್ಜ್ಕನೆಕ್ಸ್ನ ಜಂಟಿ ಉದ್ಯಮವಾಗಿರುವ ‘ಅದಾನಿ ಕನೆಕ್ಸ್’ ಸಂಸ್ಥೆ ಇದೇ ಗೂಗಲ್ ಪ್ರೊಜೆಕ್ಟ್ನಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಇಚ್ಛಿಸುತ್ತಿದೆ ಎಂದು ಅದಾನಿ ಸಮೂಹದ ಸಿಎಫ್ಒ ಜುಗೇಶಿಂದರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಗೂಗಲ್ ಮಾತ್ರವಲ್ಲ, ನಮ್ಮ ಜೊತೆಗೆ ಕೆಲಸ ಮಾಡಲು ಇತರ ಸಂಸ್ಥೆಗಳೂ ಮುಂದೆ ಬಂದಿವೆ. ಮುಖ್ಯವಾಗಿ ಡಾಟಾ ಸೆಂಟರ್ ನ ಸಾಮರ್ಥ್ಯವು ಗಿಗಾವಾಟ್ ಮತ್ತು ಇನ್ನಷ್ಟು ಹೆಚ್ಚಾದಾಗ ಇತರ ಕಂಪನಿಗಳೊಂದಿಗೆ ಸಹಯೋಗ ನಡೆಯಬಹುದು” ಎಂದು ಅವರು ತಿಳಿಸಿದ್ದಾರೆ.
AI ಸೇವೆಗಳ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಟೆಕ್ ಕಂಪನಿಗಳು ಭಾರೀ ಹೂಡಿಕೆ ಮಾಡುತ್ತಿರುವಾಗ ಈ ವರ್ಷ ಸುಮಾರು 85 ಬಿಲಿಯನ್ ಡಾಲರ್ ಅನ್ನು ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು ಏರಿಸಲೆಂದೇ ವ್ಯಯಿಸಲು ಗೂಗಲ್ ನಿರ್ಧರಿಸಿದೆ.
ಭಾರತದ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಕೂಡ ಡೇಟಾ ಸೆಂಟರ್ ಸಾಮರ್ಥ್ಯವನ್ನು ನಿರ್ಮಿಸಲು ಹೂಡಿಕೆ ಮಾಡಲು ನಿರ್ಧರಿಸಿರುವುದನ್ನು ತಿಳಿಸಿದ್ದಾರೆ.







