ಅದಾನಿ ಪವರ್ ನ ಗೊಡ್ಡಾ ಸ್ಥಾವರವನ್ನು ದೇಶದ ವಿದ್ಯುತ್ ಗ್ರಿಡ್ ಗೆ ಸಂಪರ್ಕಿಸಲು ಕೇಂದ್ರದಿಂದ ಹಸಿರು ನಿಶಾನೆ: ವರದಿ

Photo Credit : PTI
ಹೊಸದಿಲ್ಲಿ, ಅ. 17: ಜಾರ್ಖಂಡ್ನ ಗೊಡ್ಡಾದಲ್ಲಿರುವ ಅದಾನಿ ಪವರ್ ಲಿಮಿಟೆಡ್ (ಎಪಿಎಲ್) ನ ಅಲ್ಟ್ರಾ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಥಾವರವನ್ನು ಭಾರತೀಯ ವಿದ್ಯುತ್ ಗ್ರಿಡ್ಗೆ ಸಂಪರ್ಕಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು The Indian Express ವರದಿ ತಿಳಿಸಿದೆ.
ಪ್ರಸ್ತುತ ಬಾಂಗ್ಲಾದೇಶಕ್ಕೆ ಮಾತ್ರ ವಿದ್ಯುತ್ ಪೂರೈಸುತ್ತಿರುವ ಗೊಡ್ಡಾ ಸ್ಥಾವರವನ್ನು, ಈಗ ಕಹಲ್ಗಾಂವ್ ಎ–ಮೈಥಾನ್ ಬಿ 400 ಕೆವಿ ಪ್ರಸರಣ ಮಾರ್ಗಕ್ಕೆ ಲೈನ್-ಇನ್ ಲೈನ್-ಔಟ್ (LILO) ಸಂಪರ್ಕದ ಮೂಲಕ ದೇಶೀಯ ಗ್ರಿಡ್ಗೆ ಜೋಡಿಸಲಿದೆ.
ಈ ಹೊಸ ಪ್ರಸರಣ ಮಾರ್ಗವು ಗೊಡ್ಡಾ ಮತ್ತು ಪೊರೆಯಹತ್ ತಹಸಿಲ್ ಗಳ 56 ಹಳ್ಳಿಗಳ ಮೂಲಕ ಹಾದುಹೋಗಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ಭಾರತೀಯ ಟೆಲಿಗ್ರಾಫ್ ಕಾಯ್ದೆ, 1885ರ ಅಡಿಯಲ್ಲಿ ಎಪಿಎಲ್ಗೆ ಟೆಲಿಗ್ರಾಫ್ ಪ್ರಾಧಿಕಾರದಂತೆಯೇ ಅಧಿಕಾರ ನೀಡಿದೆ. ಇದರ ಮೂಲಕ ಕಂಪೆನಿಗೆ ನಿಗದಿತ ಪ್ರದೇಶಗಳಲ್ಲಿ ಪ್ರಸರಣ ಮಾರ್ಗಗಳು ಮತ್ತು ಕಂಬಗಳನ್ನು ನಿರ್ಮಿಸಲು ಹಾಗೂ ನಿರ್ವಹಿಸಲು ಕಾನೂನುಬದ್ಧ ಅವಕಾಶ ದೊರೆಯಲಿದೆ.
ಈ ನಿರ್ಧಾರವು ವಿದ್ಯುತ್ ಸಚಿವಾಲಯವು ಇತ್ತೀಚೆಗೆ ಮಾಡಿದ ನಿಯಮ ತಿದ್ದುಪಡಿಗಳ ನಂತರ ಬಂದಿದೆ. ವಿದ್ಯುತ್ ಆಮದು ಮತ್ತು ರಫ್ತು ಮಾರ್ಗಸೂಚಿ ಬದಲಾವಣೆಗಳ ಜೊತೆಗೆ ಗಡಿಯಲ್ಲಿನ ವಿದ್ಯುತ್ ಹರಿವಿನ ಕಾರ್ಯವಿಧಾನವನ್ನು ಸುಧಾರಿಸಲು ಕೇಂದ್ರ ವಿದ್ಯುತ್ ಪ್ರಾಧಿಕಾರ (CEA) ಕೈಗೊಂಡ ಕ್ರಮಗಳೂ ಒಳಗೊಂಡಿವೆ ಎಂದು ವರದಿ ಉಲ್ಲೇಖಿಸಿದೆ.
ಮಾರ್ಚ್ 2019ರಲ್ಲಿ ವಿಶೇಷ ಆರ್ಥಿಕ ವಲಯ (SEZ) ಎಂದು ಘೋಷಿಸಲ್ಪಟ್ಟ ಗೊಡ್ಡಾ ಸ್ಥಾವರವು ಬಾಂಗ್ಲಾದೇಶಕ್ಕೆ ಮಾತ್ರ ವಿದ್ಯುತ್ ಪೂರೈಸುತ್ತಿತ್ತು. ಆದರೆ, ಆಗಸ್ಟ್ 2024ರಲ್ಲಿ ಢಾಕಾದಲ್ಲಿ ಆಡಳಿತ ಬದಲಾವಣೆಯ ನಂತರ, ಭಾರತ ಸರ್ಕಾರವು ಗೊಡ್ಡಾ ಸ್ಥಾವರವನ್ನು ತಾತ್ಕಾಲಿಕವಾಗಿ ಅಂತರರಾಜ್ಯ ಪ್ರಸರಣ ವ್ಯವಸ್ಥೆ (ISTS) ಗೆ ಸಂಪರ್ಕಿಸಲು ಅನುಮತಿ ನೀಡಿತ್ತು. ಈ ವ್ಯವಸ್ಥೆ ರಾಜ್ಯಗಳ ನಡುವೆ ವಿದ್ಯುತ್ ವಿನಿಮಯಕ್ಕೆ ಮತ್ತು ರಾಷ್ಟ್ರದ ಗ್ರಿಡ್ ಸ್ಥಿರತೆಯ ನಿರ್ವಹಣೆಗೆ ಪ್ರಮುಖ ಪಾತ್ರವಹಿಸುತ್ತದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ತೆಗೆದುಹಾಕಿದ ಒಂದು ದಿನದ ಬಳಿಕ, ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ (ಎಪಿಎಲ್) ವಿದ್ಯುತ್ ಸಚಿವಾಲಯಕ್ಕೆ ಪತ್ರ ಬರೆದು, “ಬಾಂಗ್ಲಾದೇಶದಲ್ಲಿ ವಿದ್ಯುತ್ ಬೇಡಿಕೆ ಕುಂಠಿತವಾಗುವ ಅಥವಾ ಪೂರೈಕೆಯಲ್ಲಿ ಅಡಚಣೆ ಉಂಟಾದ ಸಂದರ್ಭಗಳಲ್ಲಿ, ಭಾರತದಲ್ಲಿನ ಹೆಚ್ಚುತ್ತಿರುವ ಬೇಡಿಕೆಯನ್ನು ಗೊಡ್ಡಾ ಸ್ಥಾವರದಿಂದ ಪೂರೈಸುವುದು ರಾಷ್ಟ್ರದ ಹಿತಕ್ಕೆ ಅನುಕೂಲಕರ” ಎಂದು ತಿಳಿಸಿತ್ತು.
ಕೇಂದ್ರ ವಿದ್ಯುತ್ ಸಚಿವಾಲಯದಿಂದ ನೀಡಲಾದ ಇತ್ತೀಚಿನ ಅನುಮೋದನೆ 25 ವರ್ಷಗಳ ಅವಧಿಗೆ ಮಾನ್ಯವಾಗಲಿದೆ. ಪ್ರಸರಣ ಮಾರ್ಗ ನಿರ್ಮಾಣಕ್ಕೂ ಮೊದಲು ಎಪಿಎಲ್ ಕಂಪೆನಿಗೆ ಸ್ಥಳೀಯ ಸಂಸ್ಥೆಗಳು, ರೈಲ್ವೆ, ನಾಗರಿಕ ವಿಮಾನಯಾನ ಮತ್ತು ರಕ್ಷಣಾ ಸಚಿವಾಲಯ ಸೇರಿದಂತೆ ಸಂಬಂಧಿತ ಇಲಾಖೆಗಳ ಅನುಮತಿ ಪಡೆಯಬೇಕು.
ಜೊತೆಗೆ ಕೇಂದ್ರ ವಿದ್ಯುತ್ ನಿರೀಕ್ಷಕದ ಅನುಮೋದನೆ ಮತ್ತು ವಿದ್ಯುತ್ ಕಾಯ್ದೆ, 2003ರ ನಿಯಮಾವಳಿಗಳ ಪ್ರಕಾರ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಮಾತ್ರ ಪ್ರಸರಣ ಮಾರ್ಗ ಕಾರ್ಯಾಚರಣೆ ಪ್ರಾರಂಭಿಸಲು ಅನುಮತಿ ಸಿಗಲಿದೆ.







