Adani ನಿರ್ವಹಣೆಯ ನವಿ ಮುಂಬೈ ಏರ್ ಪೋರ್ಟ್ ನೆಟ್ವರ್ಕ್ ಸಿಸ್ಟಮ್ ಅನ್ನು ನಿರ್ಬಂಧಿಸುತ್ತಿದೆ: ದೂರಸಂಪರ್ಕ ಕಂಪೆನಿಗಳ ಆರೋಪ

Photo Credit : NDTV
ಹೊಸದಿಲ್ಲಿ, ಜ. 2: ಪ್ರಯಾಣಿಕರಿಗೆ ಸೆಲ್ಯುಲರ್ ಸೇವೆಗಳನ್ನು ಒದಗಿಸಲು ನೂತನ ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯವನ್ನು ಸ್ಥಾಪಿಸಲು ಅಗತ್ಯವಿರುವ ‘ರೈಟ್ ಆಫ್ ವೇ’ (ಮಾರ್ಗ ಹಕ್ಕು) ಅನುಮತಿಗಳನ್ನು ನೀಡಲು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿ. (NMIAAL) ನಿರಾಕರಿಸಿದೆ ಎಂದು ಆರೋಪಿಸಿರುವ ದೂರಸಂಪರ್ಕ ಕಂಪೆನಿಗಳು ಕೇಂದ್ರ ಸರಕಾರದ ಹಸ್ತಕ್ಷೇಪಕ್ಕೆ ಆಗ್ರಹಿಸಿವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಅದಾನಿ ಗ್ರೂಪ್ನ ಅಂಗಸಂಸ್ಥೆ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ ಒಡೆತನದ NMIAAL ಇತ್ತೀಚೆಗೆ ಆರಂಭಗೊಂಡಿರುವ ನವಿ ಮುಂಬೈ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ.
ರೈಟ್ ಆಫ್ ವೇ ಅನುಮತಿಯು ದೂರಸಂಪರ್ಕ ಕಂಪೆನಿಗಳಂತಹ ಸಂಸ್ಥೆಗಳು ಮೂಲಸೌಕರ್ಯಗಳನ್ನು ಸ್ಥಾಪಿಸಲು ಅಥವಾ ಸಾರ್ವಜನಿಕ ಪ್ರವೇಶಕ್ಕಾಗಿ ಸರಕಾರಿ ಅಥವಾ ಖಾಸಗಿ ಭೂಮಿಯನ್ನು ಬಳಸಲು ನೀಡುವ ಅನುಮೋದನೆಯಾಗಿದೆ.
ಭಾರತೀಯ ಸೆಲ್ಯುಲರ್ ಆಪರೇಟರ್ಗಳ ಸಂಘವು ಮಂಗಳವಾರ ದೂರಸಂಪರ್ಕ ಇಲಾಖೆಗೆ ಬರೆದಿರುವ ಪತ್ರದಲ್ಲಿ NMIAAL ವಿರುದ್ಧ ‘ಏಕಸ್ವಾಮ್ಯ ವ್ಯವಸ್ಥೆಗಳನ್ನು’ ಅನುಸರಿಸುತ್ತಿದೆ ಎಂದು ಆರೋಪಿಸಿದೆ.
ಸಂಘವು ಭಾರತದ ಅತಿದೊಡ್ಡ ದೂರಸಂಪರ್ಕ ಸಂಸ್ಥೆಗಳಾದ ರಿಲಯನ್ಸ್ ಜಿಯೊ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾವನ್ನು ಪ್ರತಿನಿಧಿಸುತ್ತದೆ.
NMIAAL ವಿಮಾನ ನಿಲ್ದಾಣದೊಳಗೆ ತನ್ನದೇ ಆದ ನೆಟ್ವರ್ಕ್ ನ್ನು ನಿಯೋಜಿಸಿದ್ದು, ‘ಸ್ಪರ್ಧೆ ಹಾಗೂ ಗ್ರಾಹಕರ ಆಯ್ಕೆ’ಯನ್ನು ದುರ್ಬಲಗೊಳಿಸುವ ಭಾರೀ ಶುಲ್ಕಗಳನ್ನು ಕೇಳುತ್ತಿದೆ ಎಂದೂ ಸಂಘವು ತಿಳಿಸಿದೆ.
‘ನವಿ ಮುಂಬೈ ವಿಮಾನ ನಿಲ್ದಾಣದಲ್ಲಿ ಜಿಯೊ, ಏರ್ಟೆಲ್ ಮತ್ತು ವೊಡಾಫೋನ್ ಮೊಬೈಲ್ ಸಿಗ್ನಲ್ ಗಳು ಪ್ರಯಾಣಿಕರಿಗೆ ಲಭ್ಯವಿಲ್ಲದಿರಬಹುದು ಮತ್ತು ಬದಲಿಗೆ ಅವರು ವಿಮಾನ ನಿಲ್ದಾಣದ ವೈ-ಫೈ ಬಳಸಬಹುದು’ ಎಂಬ ಸೂಚನಾ ಫಲಕದ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾದ ನಡುವೆಯೇ ಈ ಆರೋಪಗಳು ಕೇಳಿಬಂದಿವೆ.
ಅಗತ್ಯ ಅನುಮತಿಗಳನ್ನು ನೀಡಲು ನಿರಾಕರಿಸಿರುವ NMIAAL, ತಾನು ನಿಯೋಜಿಸಿರುವ ನೆಟ್ವರ್ಕ್ ಅನ್ನು ಕಡ್ಡಾಯವಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದು, ಇದಕ್ಕಾಗಿ ಅತಿಯಾದ ಹಾಗೂ ವಾಣಿಜ್ಯಿಕವಾಗಿ ಸಮರ್ಥನೀಯವಲ್ಲದ ಶುಲ್ಕಗಳನ್ನು ನಿಗದಿಪಡಿಸಿದೆ ಎಂದು ಸಂಘವು ಪತ್ರದಲ್ಲಿ ಹೇಳಿದೆ.
NMIAAL ಪ್ರತಿ ದೂರಸಂಪರ್ಕ ಕಂಪೆನಿಯಿಂದ ಮಾಸಿಕವಾಗಿ ಸುಮಾರು 92 ಲಕ್ಷ ರೂ. ಶುಲ್ಕವನ್ನು ಕೇಳಿದ್ದು, ಇದು ನಾಲ್ಕು ಕಂಪೆನಿಗಳಿಗೆ ವಾರ್ಷಿಕವಾಗಿ ಒಟ್ಟು ಸುಮಾರು 44.1 ಕೋಟಿ ರೂ. ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ನಾಲ್ಕನೇ ದೂರಸಂಪರ್ಕ ಸಂಸ್ಥೆಯು ಸರಕಾರಿ ಸ್ವಾಮ್ಯದ BSNL ಆಗಿದೆ.
ಈ ಶುಲ್ಕಗಳು ತೀರಾ ಹೆಚ್ಚಾಗಿದ್ದು, ಕಂಪೆನಿಗಳು ಸ್ವತಂತ್ರ ಒಳಾಂಗಣ ನೆಟ್ವರ್ಕ್ ಸ್ಥಾಪಿಸಲು ಅಗತ್ಯವಿರುವ ಒಟ್ಟು ಬಂಡವಾಳ ವೆಚ್ಚವನ್ನು ಗಮನಾರ್ಹವಾಗಿ ಮೀರುತ್ತವೆ ಎಂದು ಪತ್ರದಲ್ಲಿ ಬೆಟ್ಟು ಮಾಡಲಾಗಿದೆ.
2023ರ ದೂರಸಂಪರ್ಕ ಕಾಯ್ದೆ ಹಾಗೂ 2024ರ ದೂರಸಂಪರ್ಕ ಮಾರ್ಗ ಹಕ್ಕು ನಿಯಮಗಳಡಿ ವಿಮಾನ ನಿಲ್ದಾಣವು ಸಾರ್ವಜನಿಕ ಘಟಕವಾಗಿದೆ ಎಂದು ಹೇಳಿರುವ ಸಂಘವು, ತಾರತಮ್ಯವಿಲ್ಲದ ಮತ್ತು ಕಾಲಮಿತಿಯ ರೀತಿಯಲ್ಲಿ ದೂರಸಂಪರ್ಕ ಮೂಲಸೌಕರ್ಯವನ್ನು ಸ್ಥಾಪಿಸಲು ರೈಟ್ ಆಫ್ ವೇ ಅನುಮತಿಯನ್ನು ನೀಡುವುದು NMIAAL ನ ಶಾಸನಬದ್ಧ ಬಾಧ್ಯತೆಯಾಗಿದೆ ಎಂದು ಪ್ರತಿಪಾದಿಸಿದೆ.
ಈ ಆರೋಪಗಳನ್ನು ನಿರಾಕರಿಸಿರುವ NMIAAL, ವಿಮಾನ ನಿಲ್ದಾಣವು ಸೂಕ್ಷ್ಮ ವಲಯವಾಗಿದ್ದು, ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸೇವೆ ಮತ್ತು ನಿರ್ವಹಣೆಯನ್ನು ತಾನು ಮಾತ್ರ ಉತ್ತಮವಾಗಿ ನಿರ್ವಹಿಸಲು ಸಾಧ್ಯವೆಂದು ಹೇಳಿದೆ. ಹೀಗಾಗಿ ಸ್ವತಂತ್ರ ನೆಟ್ವರ್ಕ್ನ್ನು ತಾನು ಸ್ಥಾಪಿಸಿದ್ದು, ಇದು ವಿಮಾನ ನಿಲ್ದಾಣದಾದ್ಯಂತ ಅಡೆತಡೆಯಿಲ್ಲದ ಸಂಪರ್ಕ ಸೌಲಭ್ಯವನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದೆ.







