ನೌಕಾ ಪಡೆಯ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕುಮಾರ್ ಅಧಿಕಾರ ಸ್ವೀಕಾರ

PC : PTI
ಹೊಸದಿಲ್ಲಿ : ಭಾರತೀಯ ನೌಕಾ ಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಭಾರತದ 26ನೇ ನೌಕಾ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2 ವರ್ಷ ಹಾಗೂ 5 ತಿಂಗಳು ಕಾಲ ಈ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸಿದ ಬಳಿಕ ನಿವೃತ್ತರಾದ ಅಡ್ಮಿರಲ್ ಆರ್. ಹರಿ ಕುಮಾರ್ ಅವರ ಸ್ಥಾನಕ್ಕೆ ಈಗ ದಿನೇಶ್ ಕುಮಾರ್ ತ್ರಿಪಾಠಿ ನೇಮಕರಾಗಿದ್ದಾರೆ.
1964 ಮೇ 15ರಂದು ಜನಿಸಿದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಸೈನಿಕ್ ಸ್ಕೂಲ್ ರೇವಾ ಹಾಗೂ ಕಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆ ವಿದ್ಯಾರ್ಥಿ. ಇವರು 1985 ಜುಲೈ 1ರಂದು ನೌಕಾ ಪಡೆಯ ಕಾರ್ಯ ನಿರ್ವಾಹಕ ಶಾಖೆಗೆ ನಿಯೋಜಿಸಲ್ಪಟ್ಟರು. ಸಂವಹನ ಹಾಗೂ ಎಲೆಕ್ಟ್ರಾನಿಕ್ ಯುದ್ಧ ತಜ್ಞರಾಗಿರುವ ಅವರು ಸುಮಾರು 39 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ದಿನೇಶ್ ಕುಮಾರ್ ತ್ರಿಪಾಠಿ, ಇತ್ತೀಚೆಗಿನ ವರ್ಷಗಳಲ್ಲಿ ನೌಕಾಪಡೆಯು ಯದ್ಧಕ್ಕೆ ಸಿದ್ಧವಾದ ಶಕ್ತಿಯಾಗಿ ವಿಕಸನಗೊಂಡಿದೆ. ನೌಕಾಪಡೆ ಆತ್ಮ ನಿರ್ಭರದ ಕಡೆಗೆ ಸಾಗುತ್ತಿರುವ ಪ್ರಯತ್ನಗಳನ್ನು ಬಲಪಡಿಸುವುದು ಹಾಗೂ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದು ತನ್ನ ಆದ್ಯತೆಯಾಗಿದೆ ಎಂದರು.





