ಪಾನ ನಿಷೇಧದ ಗುಜರಾತ್ ಮಾದರಿಯನ್ನು ಬಿಹಾರದಲ್ಲಿ ಅಳವಡಿಸಿಕೊಳ್ಳಿ: ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿ ಆಗ್ರಹ

ಜಿತನ್ ರಾಮ್ ಮಾಂಝಿ | Photo: PTI
ಪಾಟ್ನಾ: ಗುಜರಾತ್ ರಾಜ್ಯವು ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿಗೆ ಪಾನ ನಿಷೇಧ ಕಾಯ್ದೆಯಿಂದ ವಿನಾಯಿತಿ ನೀಡಿರುವಂತೆ ಬಿಹಾರದಲ್ಲೂ ಮದ್ಯ ಸೇವನೆಯ ಕುರಿತ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಸಲಹೆ ನೀಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾನ ನಿಷೇಧದ ಗುಜರಾತ್ ಮಾದರಿಯನ್ನು ಜಾರಿಗೊಳಿಸಿದರೆ ಬಿಹಾರದ ವಹಿವಾಟು ಹಾಗೂ ವಿದೇಶಿ ವಿನಿಮಯ ಹೆಚ್ಚಳವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
“ಬಿಹಾರವು ನಿರಂತರವಾಗಿ ಆದಾಯ ಖೋತಾ ಅನುಭವಿಸುತ್ತಿದೆ. 2016ರಿಂದ ರಾಜ್ಯದಲ್ಲಿ ಪಾನ ನಿಷೇಧ ಜಾರಿಯಲ್ಲಿರುವುದರಿಂದ ರಾಜ್ಯದಲ್ಲಿನ ಪ್ರವಾಸೋದ್ಯಮ ಕುಂಠಿತಗೊಂಡಿದೆ. ನಾನು ಇದನ್ನು ಹಲವಾರು ದಿನಗಳಿಂದ ಮತ್ತು ಪದೇ ಪದೇ ಹೇಳುತ್ತಿದ್ದೇನೆ. ನಿಯಮಿತ ಪ್ರಮಾಣದ ಮದ್ಯಪಾನ ಮಾಡುವುದರಿಂದ ಬಡವರು ಮತ್ತು ಶ್ರಮಿಕ ವರ್ಗದ ಜನರಿಗೆ ಲಾಭವಾಗಲಿದೆ” ಎಂದು ಅವರು ಹೇಳಿದ್ದಾರೆ.
“ಇಂತಹ ನಿರ್ಧಾರ ಕೈಗೊಂಡ ಗುಜರಾತ್ ಸರ್ಕಾರಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅದೇ ಬಗೆಯಲ್ಲಿ ಬಿಹಾರದಲ್ಲೂ ಮಾಡಿದರೆ, ವಿದೇಶಿ ವಿನಿಮಯ ಗಳಿಕೆಯಲ್ಲಿ 10 ಪಟ್ಟು ಹೆಚ್ಚಳವಾಗಲಿದೆ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
“2005-2010ರವರೆಗೆ ನಿತೀಶ್ ಕುಮಾರ್ ಪ್ರತಿ ಮನೆಮನೆಯಲ್ಲೂ ಮದ್ಯ ದೊರೆಯುವಂತೆ ಮಾಡಿದ್ದರು. ಆದರೀಗ ನಾನು ಮದ್ಯಪಾನ ವಿರೋಧಿ ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಮಾಂಝಿ ವಾಗ್ದಾಳಿ ನಡೆಸಿದ್ದಾರೆ.
2016ರಲ್ಲಿ ಬಿಹಾರ ಸರ್ಕಾರವು ಮದ್ಯದ ಮಾರಾಟ, ಖರೀದಿ, ಕುಡಿತ, ಉತ್ಪಾದನೆ ಹಾಗೂ ಸಂಗ್ರಹಣೆಯ ಮೇಲೆ ರಾಜ್ಯದಾದ್ಯಂತ ನಿಷೇಧ ಹೇರಿತ್ತು. ಈ ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಭಾರಿ ದಂಡ ಹಾಗೂ ಶಿಕ್ಷೆಯನ್ನು ವಿಧಿಸಲಾಗುತ್ತಿದೆ.







