ಸುಪ್ರೀಂ ಕೋರ್ಟ್ ಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ ಆರೋಪವನ್ನು ಅಲ್ಲಗಳೆದ ADR

Photo Credit : X / @adrspeaks
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಗೆ ತಾನು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದೇನೆ ಎಂಬ ಆರೋಪವನ್ನು ಚುನಾವಣಾ ಹಕ್ಕುಗಳ ಸಂಘಟನೆ ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಲ್ಲಗಳೆದಿದೆ. ಪ್ರಶ್ನೆಗೊಳಗಾಗಿರುವ ದಾಖಲೆಯನ್ನು ತಾನು ಅಧಿಕೃತವಾಗಿ ಸಲ್ಲಿಸಿಲ್ಲ. ಬದಲಿಗೆ, ನ್ಯಾಯಪೀಠದ ಪ್ರಶ್ನೆಗೆ ಪ್ರತಿಯಾಗಿ ಅದನ್ನು ಕೇವಲ ವಕೀಲರ ಮೂಲಕ ಸಲ್ಲಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಿಖರವಲ್ಲದ ದತ್ತಾಂಶವಿದ್ದು, ಅದರಲ್ಲಿ ಉಲ್ಲೇಖಿಸಲಾಗಿರುವ ಮತದಾರನು ಮತಪಟ್ಟಿಯಲ್ಲಿಲ್ಲ ಎಂದು ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಚುನಾವಣಾ ಆಯೋಗದ ಪರ ವಕೀಲರು ವಾದಿಸಿದರು ಎಂಬ ಮಾಧ್ಯಮ ವರದಿಗಳ ಬೆನ್ನಿಗೇ, ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನಿಂದ ಈ ಸ್ಪಷ್ಟೀಕರಣ ಹೊರ ಬಿದ್ದಿದೆ.
ಈ ಕುರಿತು ವಿಸ್ತೃತ ಹೇಳಿಕೆ ಸಲ್ಲಿಸಿರುವ ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, “ಮಾಹಿತಿಯ ನಿಖರ ಪ್ರಸರಣದ ಮೌಲ್ಯಗಳಿಗೆ ನಾನು ಬದ್ಧವಾಗಿದ್ದೇನೆ” ಎಂದು ಹೇಳಿದ್ದು, ತನ್ನ ಮಾಹಿತಿಯನ್ನು ತಪ್ಪು ಮತ್ತು ದಾರಿ ತಪ್ಪಿಸುವಂಥದ್ದು ಎಂಬ ಚುನಾವಣಾ ಆಯೋಗದ ವಕೀಲರ ವಾದವನ್ನು ತಳ್ಳಿ ಹಾಕಿದೆ.
“ಮೇಲಿನ ಎಲ್ಲ ಸಂಗತಿಗಳೂ ಸಮರ್ಪಕವಾಗಿದ್ದು, ಭಾರತೀಯ ಚುನಾವಣಾ ಆಯೋಗದ ಅಂತರ್ಜಾಲ ತಾಣದಲ್ಲಿ ಅವನ್ನು ಪರಿಶೀಲಿಸಬಹುದಾಗಿದೆ. ಹೀಗಾಗಿ, ಸದರಿ ಮತದಾರ ಅಸ್ತಿತ್ವದಲ್ಲಿಲ್ಲ ಅಥವಾ ಚುನಾವಣಾ ಗುರುತಿನ ಚೀಟಿಯು ಮತ್ತೊಬ್ಬರಿಗೆ ಸೇರಿದ್ದು ಎಂಬ ಚುನಾವಣಾ ಆಯೋಗದ ವಕೀಲರ ಅಭಿಪ್ರಾಯ ತಪ್ಪು ಮತ್ತು ದಾರಿ ತಪ್ಪಿಸುವಂತಹದ್ದಾಗಿದೆ. ವಾಸ್ತವವಾಗಿ, ಚುನಾವಣಾ ಆಯೋಗವು ಈ ವಿವರಗಳನ್ನು ಆತನ ಚುನಾವಣಾ ಗುರುತಿನ ಚೀಟಿಯ ಮೂಲಕ ಸುಲಭವಾಗಿ ಪರಿಶೀಲಿಸಬೇಕಿತ್ತು ಮತ್ತು ಪರಿಶೀಲಿಸಬಹುದಿತ್ತು. ಬದಲಿಗೆ, ಆತ ನಕಲಿ ಮತದಾರ ಅಥವಾ ಗುರುತಿನ ಚೀಟಿಯಲ್ಲಿನ ವಿಳಾಸ ಆತನಿಗೆ ಸಂಬಂಧಿಸಿದ್ದಲ್ಲ ಎಂದು ಅವರು ವಾದಿಸುತ್ತಿದ್ದಾರೆ” ಎಂದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಪ್ರಮಾಣ ಪತ್ರದಲ್ಲಿ ಒದಗಿಸಲಾಗಿರುವ ಮತದಾರನ ವಿವರಗಳನ್ನು ಚುನಾವಣಾ ಆಯೋಗದ ಅಂತರ್ಜಾಲ ತಾಣದಲ್ಲಿ ಪರಿಶೀಲಿಸಬಹುದಾಗಿದೆ ಎಂದೂ ಅದು ಹೇಳಿದೆ.







