ವಿಮಾನದ ಹಿಂಬದಿ ಚಕ್ರದಲ್ಲಿ ಅವಿತಿಟ್ಟುಕೊಂಡು ಜೀವಂತವಾಗಿ ದಿಲ್ಲಿಗೆ ತಲುಪಿದ ಅಫ್ಘನ್ ಬಾಲಕ!

PC: @KamairRQ
ಹೊಸದಿಲ್ಲಿ: 13 ವರ್ಷದ ಅಪ್ಘನ್ ಬಾಲಕನೊಬ್ಬ ವಿಮಾನದ ಹಿಂಬದಿ ಚಕ್ರದಲ್ಲಿ ಅವಿತಿಟ್ಟುಕೊಂಡು ಜೀವಂತವಾಗಿ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿರುವ ಅಚ್ಚರಿಯ ಘಟನೆ ನಡೆದಿದೆ ಎಂದು newindianexpress.com ವರದಿ ಮಾಡಿದೆ.
94 ನಿಮಿಷದ ಈ ಪ್ರಯಾಣದಲ್ಲಿ ಜೀವಂತವಾಗಿ ಬದುಕುಳಿದಿರುವ ಬಾಲಕ, ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಿರ ಆರೋಗ್ಯ ಸ್ಥಿತಿಯೊಂದಿಗೆ ಬಂದಿಳಿದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯು ಅಫ್ಘನಿಸ್ತಾನದ ಕೆಎಎಂ ಏರ್ ಕಾರ್ಯಾಚರಿಸುವ ವಿಮಾನ ಸಂಖ್ಯೆ ಆರ್.ಕ್ಯೂ.4401 ವಿಮಾನದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
Flightradar24.com ಪ್ರಕಾರ, ಭಾರತೀಯ ಕಾಲಮಾನ 8.46ಕ್ಕೆ ಏರ್ ಬಸ್ 340 ವಿಮಾನವು ಹಮೀದ್ ಕರ್ಝೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿ, ಭಾರತೀಯ ಕಾಲಮಾನ ಬೆಳಗ್ಗೆ 10.20ಕ್ಕೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂರನೆಯ ಟರ್ಮಿನಲ್ ಗೆ ಬಂದಿಳಿದಿತ್ತು. ಕುರ್ತಾ ಮತ್ತು ಪೈಜಾಮಾ ಧರಿಸಿದ್ದ ಬಾಲಕನು ಇರಾನ್ ಗೆ ಕಳ್ಳ ಮಾರ್ಗದಲ್ಲಿ ನುಸುಳಲು ಬಯಸಿದ್ದನಾದರೂ, ತಪ್ಪು ವಿಮಾನವನ್ನೇರಿದ್ದ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹಿಂದೆ ಬಚ್ಚಿಟ್ಟುಕೊಂಡು ವಿಮಾನಕ್ಕೆ ಪ್ರವೇಶ ಪಡೆದೆ ಹಾಗೂ ವಿಮಾನವೇರಿದ ಮೇಲೆ ಚಕ್ರದಲ್ಲಿ ಬಚ್ಚಿಟ್ಟುಕೊಂಡೆ ಎಂದು ಆ ಬಾಲಕ ಭದ್ರತಾ ಸಿಬ್ಬಂದಿಗಳ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
“ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಭದ್ರತಾ ತಪಾಸಣೆ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಯನ್ನು ಎತ್ತಿದೆ” ಎಂದು ಮೂಲಗಳು ಕಳವಳ ವ್ಯಕ್ತಪಡಿಸಿವೆ.
ಮೂರನೆಯ ಟರ್ಮಿನಲ್ ನ ಟ್ಯಾಕ್ಸಿವೇಯಲ್ಲಿ ಈ ಬಾಲಕನನ್ನು ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿಯೊಬ್ಬ ಪತ್ತೆ ಹಚ್ಚಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ವಿಮಾನವು ಭೂಸ್ಪರ್ಶ ಮಾಡಿ, ಪ್ರಯಾಣಿಕರೆಲ್ಲ ವಿಮಾನದಿಂದ ಇಳಿದು ಹೊರ ಹೋದ ನಂತರ, ಬಾಲಕನು ನಿರ್ಬಂಧಿತ ಏಪ್ರನ್ ಪ್ರದೇಶದೊಳಗೆ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಕೂಡಲೇ ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿಯು ಈ ಕುರಿತು ಭದ್ರತಾ ಪ್ರಾಧಿಕಾರಗಳಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಬಾಲಕನನ್ನು ವಶಕ್ಕೆ ಪಡೆಯಿತು. ನಂತರ, ಆತನನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಿತು. ಬಾಲಕನು ಅಪ್ರಾಪ್ತನಾಗಿರುವುದರಿಂದ, ಆತ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯಲಿದ್ದಾನೆ ಎಂದು ಮೂಲಗಳು ದೃಢಪಡಿಸಿವೆ.







