ಅಫ್ಸ್ಪಾ: ಅಸ್ಸಾಂನ 4 ಜಿಲ್ಲೆಗಳಲ್ಲಿ ಜಾರಿ, 4 ಜಿಲ್ಲೆಗಳಲ್ಲಿ ಹಿಂದಕ್ಕೆ

ಸಾಂದರ್ಭಿಕ ಚಿತ್ರ
ದಿಸ್ಪುರ, ಅ. 1: ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಅಥವಾ ಅಫ್ಸ್ಪಾ ವನ್ನು ಅಸ್ಸಾಂನ 4 ಜಿಲ್ಲೆಗಳಲ್ಲಿ 6 ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ಪೊಲೀಸರು ರವಿವಾರ ತಿಳಿಸಿದ್ದಾರೆ.
ಅಫ್ಸ್ಪಾ ‘ಪ್ರಕ್ಷುಬ್ದ ಪ್ರದೇಶ’ ಎಂದು ಘೋಷಿಸಲಾದ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ‘ಪಕ್ಷ್ಷುಬ್ದ ಪ್ರದೇಶ’ ಘೋಷಣೆಯನ್ನು ಸರಕಾರ ಹಿಂದೆ ಪಡೆದಿದೆ. ಆದುದರಿಂದ ಇನ್ನು ಮುಂದೆ 4 ಜಿಲ್ಲೆಗಳಲ್ಲಿ ಅಫ್ಸ್ಪಾ ಜಾರಿಯಲ್ಲಿರುವುದಿಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
‘ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಅಗತ್ಯವಾದರೆ ಪ್ರಕ್ಷುಬ್ದ ಪ್ರದೇಶ’ಲ್ಲಿ ಶೋಧ ನಡೆಸುವ, ಬಂಧಿಸುವ ಹಾಗೂ ಗುಂಡು ಹಾರಿಸುವ ಅಧಿಕಾರವನ್ನು ಅಫ್ಸ್ಪಾ ಸೇನಾ ಸಿಬ್ಬಂದಿಗೆ ನೀಡುತ್ತದೆ.
‘‘ಇಂದಿನಿಂದ ಅಸ್ಸಾಂನ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಅಫ್ಸ್ಪಾ ಜಾರಿಯಲ್ಲಿರಲಿದೆ. ಈ ಜಿಲ್ಲೆಗಳೆಂದರೆ ದಿಬ್ರುಗಢ, ತೀನ್ಸುಕಿಯಾ, ಶಿವಸಾಗರ್ ಹಾಗೂ ಚರೈಡಿಯೊ’’ ಎಂದು ಅವರು ತಿಳಿಸಿದ್ದಾರೆ.





