ನಿಷೇಧಿತ ʼಸಿಮಿʼಗೆ ಸಂಬಂಧಿಸಿದ ಪ್ರಕರಣ |18 ವರ್ಷಗಳ ಬಳಿಕ 8 ಜನರನ್ನು ಖುಲಾಸೆಗೊಳಿಸಿದ ನಾಗ್ಪುರ ನ್ಯಾಯಾಲಯ

ಸಾಂದರ್ಭಿಕ ಚಿತ್ರ
ನಾಗ್ಪುರ: ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮ್ಮೆಂಟ್ ಆಫ್ ಇಂಡಿಯಾ(ಸಿಮಿ)ಗೆ ಸಂಬಂಧಿಸಿದ ಸಭೆಗಳನ್ನು ಆಯೋಜಿಸಿದ, ಕರಪತ್ರಗಳನ್ನು ವಿತರಿಸಿದ ಆರೋಪದ ಮೇಲೆ 18 ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಂಟು ಜನರನ್ನು ನಾಗ್ಪುರ ನ್ಯಾಯಾಲಯ ಖುಲಾಸೆಗೊಳಿಸಿದೆ.
ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎ.ಕೆ. ಬಂಕರ್ ಅವರು ತಮ್ಮ ಆದೇಶದಲ್ಲಿ, “ಆರೋಪಿಗಳು ಯಾವುದೇ ಕೃತ್ಯಗಳನ್ನು ಎಸಗಿರುವ, ಸಭೆಗಳಲ್ಲಿ ಭಾಗವಹಿಸಿರುವ, ಪ್ರಚಾರಮಾಡಿರುವ, ಆರ್ಥಿಕವಾಗಿ ಅಥವಾ ಇತರ ರೀತಿಯಲ್ಲಿ ಬೆಂಬಲ ನೀಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ" ಎಂದು ಹೇಳಿದ್ದಾರೆ.
ಶಾಕಿರ್ ಅಹ್ಮದ್, ನಾಸಿರ್ ಅಹ್ಮದ್, ಶಕಿಲ್ ವಾರ್ಸಿ, ಮುಹಮ್ಮದ್ ರೆಹಾನ್ ಅತುಲ್ಲಾಖಾನ್, ಮಹೇಬೂಬ್ ಖಾನ್, ವಕಾರ್ ಬೇಗ್ ಯೂಸುಫ್ ಬೇಗ್, ಇಮ್ತಿಯಾಝ್ ಅಹ್ಮದ್ ನಿಸಾರ್ ಅಹ್ಮದ್, ಮುಹಮ್ಮದ್ ಅಬ್ರಾರ್ ಆರಿಫ್ ಮೊಹಮ್ಮದ್ ಕಾಶಿಮ್ ಮತ್ತು ಶೇಖ್ ಅಹ್ಮದ್ ಶೇಖ್ ಅವರ ವಿರುದ್ಧ 2006ರಲ್ಲಿ ಯುಎಪಿಎ ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ವೇಳೆ ಎಲ್ಲರೂ 30ರ ಹರೆಯದವರಾಗಿದ್ದರು.
ಇದೀಗ 18 ವರ್ಷಗಳ ಬಳಿಕ ಯುಎಪಿಎ ಸೆಕ್ಷನ್ 10 ಮತ್ತು 13ರ ಅಡಿಯಲ್ಲಿ ಎಲ್ಲಾ ಎಂಟು ಜನರನ್ನು ಆರೋಪಗಳಿಂದ ಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ.







