ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆಗೆ ಸಿದ್ಧತೆ ಆರಂಭಿಸಲು ಎಲ್ಲಾ ರಾಜ್ಯಗಳಿಗೆ ಚುನಾವಣಾ ಆಯೋಗದ ಸೂಚನೆ: ವರದಿ

PC : indianexpress.com
ಹೊಸದಿಲ್ಲಿ: ಬಿಹಾರದಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾದ ಮರುದಿನ, ಅಂದರೆ ಜು.5ರಂದು ಆಯೋಗವು ಜ.1, 2026ನ್ನು ಅರ್ಹತಾ ದಿನವಾಗಿಟ್ಟುಕೊಂಡು ಇಂತಹುದೇ ಪ್ರಕ್ರಿಯೆಗೆ ಸಿದ್ಧತೆಗಳನ್ನು ಆರಂಭಿಸುವಂತೆ ಇತರ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿ (ಸಿಇಒ)ಗಳಿಗೆ ಸೂಚಿಸಿ ಪತ್ರವನ್ನು ಬರೆದಿದೆ ಎಂದು indianexpress.com ವರದಿ ಮಾಡಿದೆ.
ಬಿಹಾರಕ್ಕೆ ಅರ್ಹತೆಗೆ ಪುರಾವೆಯಾಗಿ 2003ನ್ನು ಆಯ್ಕೆ ಮಾಡಲಾಗಿದೆ, ಅಂದರೆ ಕೊನೆಯ ಬಾರಿ ಎಸ್ಐಆರ್ ನಡೆದಿದ್ದ ಆ ವರ್ಷದ ಮತದಾರರ ಪಟ್ಟಿಗಳಲ್ಲಿದ್ದ ಮತದಾರರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇತರ ರಾಜ್ಯಗಳೂ ಕೊನೆಯ ಬಾರಿ ಎಸ್ಐಆರ್ ನಡೆದಿದ್ದ ವರ್ಷವನ್ನೇ ಅರ್ಹತೆಗೆ ಪುರಾವೆಯಾಗಿ ಪರಿಗಣಿಸುವ ಸಾಧ್ಯತೆಯಿದೆ. ಉದಾಹರಣೆಗೆ ದಿಲ್ಲಿಯಲ್ಲಿ ಕೊನೆಯ ಎಸ್ಐಆರ್ 2008ರಲ್ಲಿ ನಡೆದಿತ್ತು.
ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ (ಯಾವುದೇ ಮತಗಟ್ಟೆಯು 1,200ಕ್ಕಿಂತ ಹೆಚ್ಚಿನ ಮತದಾರರನ್ನು ಹೊಂದಿಲ್ಲ ಎನ್ನುವುದು ಖಚಿತಪಡಿಸಿಕೊಳ್ಳುವುದು ಸೇರಿದಂತೆ), ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ), ಚುನಾವಣಾ ನೋಂದಣಾಧಿಕಾರಿಗಳಿಂದ(ಇಆರ್ಒ) ಹಿಡಿದು ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು (ಎಇಆರ್ಒ) ಮತ್ತು ತಳಮಟ್ಟದಲ್ಲಿ ಮತಎಣಿಕೆಯನ್ನು ಕೈಗೊಳ್ಳುವ ಮೇಲ್ವಿಚಾರಕರವರೆಗೆ ಎಲ್ಲ ಪ್ರಮುಖ ಅಧಿಕಾರಿಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಅವರಿಗೆ ತರಬೇತಿಯನ್ನು ನೀಡುವುದು; ಇವು ಸಿಇಒಗಳು ಎಸ್ಐಆರ್ ಗಾಗಿ ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳಲ್ಲಿ ಸೇರಿವೆ.
2026ರಲ್ಲಿ ಬಿಜೆಪಿ ಆಡಳಿತದ ಅಸ್ಸಾಂ,ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳ,ಡಿಎಂಕೆ ಆಡಳಿತದ ತಮಿಳುನಾಡು ಮತ್ತು ಎಡರಂಗ ಆಡಳಿತದ ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಈ ನಿರ್ದೇಶನವು ಮಹತ್ವವನ್ನು ಪಡೆದುಕೊಂಡಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೂಡ ಮುಂದಿನ ವರ್ಷ ನೂತನ ವಿಧಾನಸಭೆಯನ್ನು ಆಯ್ಕೆ ಮಾಡಲಿದೆ.
ಪ್ರತಿಪಕ್ಷಗಳ ಆಡಳಿತವಿರುವ ಮೂರು ರಾಜ್ಯಗಳು ಸೇರಿದಂತೆ ಈ ನಾಲ್ಕು ರಾಜ್ಯಗಳಲ್ಲಿ ಎಸ್ಐಆರ್ ಅನ್ನು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳೊಂದಿಗೆ ತಳುಕು ಹಾಕಲಾಗುವುದೇ ಎನ್ನುವುದು ಬಿಹಾರದಲ್ಲಿ ಎಸ್ಐಆರ್ ಪ್ರಶ್ನಿಸಿರುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯು ಹೇಗೆ ನಡೆಯುತ್ತದೆ ಎನ್ನುವುದನ್ನು ಅವಲಂಬಿಸಿರಬಹುದು.
ಗುರುವಾರ(ಜು.10)ನಡೆದ ವಿಚಾರಣೆಯ ಸಂದರ್ಭದಲ್ಲಿ ಎಸ್ಐಆರ್ ಪ್ರಕ್ರಿಯೆಯ ಸಮಯದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಅದನ್ನು ರಾಜ್ಯ ವಿಧಾನಸಭಾ ಚುನಾವಣೆಯಿಂದ ಪ್ರತ್ಯೇಕಿಸಬಹುದೇ ಎನ್ನುವುದನ್ನು ತಿಳಿಯಲು ಬಯಸಿತ್ತು. ದ್ವಿಸದಸ್ಯ ಪೀಠದ ಭಾಗವಾಗಿದ್ದ ನ್ಯಾ.ಜಾಯಮಲ್ಯಾ ಬಾಗ್ಚಿ ಅವರು ಮತದಾರರ ಪಟ್ಟಿಗಳನ್ನು ಪರಿಷ್ಕರಿಸುವ ಉದ್ದೇಶವು ಕಾನೂನುಬದ್ಧವಾಗಿದ್ದರೂ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಮೂಲಕ ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳುವ ಅಪಾಯವನ್ನು ಗುರುತಿಸಿದ್ದರು.
ಅಂತಿಮವಾಗಿ, ಬಿಹಾರದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ತಡೆಯಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು ಮತದಾರರ ಪಟ್ಟಿಗಳ ನವೀಕರಣಕ್ಕಾಗಿ ಆಧಾರ್,ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಆಯೋಗವು ಈ ಸೂಚನೆಯನ್ನು ಒಪ್ಪಿಕೊಂಡರೆ ಮತದಾರರು ಸಲ್ಲಿಸಬೇಕಿರುವ ಪ್ರಸ್ತುತ 11 ದಾಖಲೆಗಳ ಪಟ್ಟಿಯು ವಿಸ್ತರಣೆಗೊಳ್ಳಲಿದೆ.
ಬಿಹಾರದ ಹೆಚ್ಚಿನ ಕುಟುಂಬಗಳು ಹೊಂದಿರುವ ದಾಖಲೆಗಳಲ್ಲಿ ಆಧಾರ್,ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳು ಸೇರಿವೆ. ಆದರೆ ಇವ್ಯಾವುದೂ ಅಗತ್ಯ 11 ದಾಖಲೆಗಳ ಪಟ್ಟಿಯಲ್ಲಿ ಇಲ್ಲದಿರುವುದು ಬಿಹಾರದ ಜನರಲ್ಲಿ ವ್ಯಾಪಕ ಭೀತಿ ಮತ್ತು ಗೊಂದಲವನ್ನು ಸೃಷ್ಟಿಸಿದೆ.







