ಬಿಹಾರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: 35.6 ಲಕ್ಷ ಹೆಸರುಗಳನ್ನು ಕೈಬಿಟ್ಟ ಚುನಾವಣಾ ಆಯೋಗ!

ಸಾಂದರ್ಭಿಕ ಚಿತ್ರ (PTI)
ಪಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯ "ವಿಶೇಷ ತೀವ್ರ ಪರಿಷ್ಕರಣೆ (SIR)" ಪ್ರಕ್ರಿಯೆಯಲ್ಲಿ ಈವರೆಗೆ 35.6 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ ಎಂದು news18.com ವರದಿ ಮಾಡಿದೆ.
ಆಯೋಗ ನೀಡಿರುವ ಅಂಕಿಅಂಶಗಳ ಪ್ರಕಾರ, ಈವರೆಗೆ ಕೈಬಿಡಲಾದ ಹೆಸರುಗಳಲ್ಲಿ 12.55 ಲಕ್ಷ ಮತದಾರರು (1.59%) ಮೃತಪಟ್ಟವರು, 17.37 ಲಕ್ಷ (2.2%) ಮತದಾರರು ರಾಜ್ಯದಿಂದ ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ 5.76 ಲಕ್ಷ (0.73%) ಮತದಾರರು ನಕಲಿ ದಾಖಲೆಗಳೊಂದಿಗೆ ಪತ್ತೆಯಾದವರು ಎಂದು ತಿಳಿದುಬಂದಿದೆ.
ಬಿಹಾರದಲ್ಲಿ ಒಟ್ಟು 7.90 ಕೋಟಿ ಮತದಾರರು ನೋಂದಾಯಿತರಾಗಿದ್ದು, ಅವರ ಪೈಕಿ ಸುಮಾರು 6.60 ಕೋಟಿ (83.66%) ಜನರು ಈಗಾಗಲೇ ತಮ್ಮ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿದ್ದಾರೆ. ಹಾಗಾಗಿ ಈ ಪ್ರಕ್ರಿಯೆಯ 88.18% ಈಗಾಗಲೇ ಪೂರ್ಣಗೊಂಡಿರುವುದಾಗಿ ಆಯೋಗ ತಿಳಿಸಿದೆ. ಉಳಿದ 11.82% ಮತದಾರರು ತಮ್ಮ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವ ನಿರೀಕ್ಷೆ ಇದೆ.
ವಿಶೇಷ ಪರಿಷ್ಕರಣೆ ಪ್ರಕ್ರಿಯೆಗೆ ವಿರೋಧ ಪಕ್ಷಗಳು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ಆಧಾರಿತ ಅವ್ಯವಸ್ಥಿತ ಪ್ರಕ್ರಿಯೆಯೆ ಎಂದು ಟೀಕಿಸಿದೆ. ಆದರೆ, ಆಯೋಗ ತನ್ನ ಕಾರ್ಯವಿಧಾನವು ಪೂರ್ಣವಾಗಿ ಪಾರದರ್ಶಕ ಮತ್ತು ನಿಯಮಾನುಸಾರ ನಡೆಯುತ್ತಿದೆ ಎಂದು ಪ್ರತಿಕ್ರಿಯೆ ನೀಡಿದೆ.
ತಾತ್ಕಾಲಿಕವಾಗಿ ವಲಸೆ ಹೋದ ಮತದಾರರಿಗೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದ್ದು, ಮತದಾರರು ತಮ್ಮ ಅರ್ಜಿಗಳನ್ನು ಆನ್ಲೈನ್ನಲ್ಲಿ https://voters.eci.gov.in ಅಥವಾ ಇಸಿನೆಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದಾಗಿದೆ. ತಮ್ಮ ಕುಟುಂಬ ಸದಸ್ಯರು ಅಥವಾ WhatsApp ಮುಂತಾದ ಅವಕಾಶಗಳನ್ನು ಬಳಸಿ BLO (ಬೂತ್ ಮಟ್ಟದ ಅಧಿಕಾರಿಗಳು) ಗಳಿಗೆ ಅರ್ಜಿಗಳನ್ನು ಕಳುಹಿಸುವ ವ್ಯವಸ್ಥೆಯನ್ನೂ ಒದಗಿಸಲಾಗಿದೆ.
ಇತ್ತೀಚೆಗೆ ಪರಿಚಯಿಸಲಾದ ECINet ಅಪ್ಲಿಕೇಶನ್ ಮೂಲಕ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಅರ್ಜಿಗಳ ನವೀಕರಣ, ಪರಿಶೀಲನೆ ಮತ್ತು ಡಿಜಿಟಲ್ ದಾಖಲಾತಿ ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಈ ಅಪ್ಲಿಕೇಷನ್ ನಲ್ಲಿ 40ಕ್ಕೂ ಹೆಚ್ಚು ತಂತ್ರಜ್ಞಾನ ವ್ಯವಸ್ಥೆಗಳನ್ನು ಏಕೀಕರಿಸಲಾಗಿದ್ದು, ಪ್ರಕ್ರಿಯೆಯ ವೇಗ ಮತ್ತು ನಿಖರತೆ ಹೆಚ್ಚಿಸಲಾಗಿದೆ. ಸೋಮವಾರದ ವೇಳೆಗೆ 5.74 ಕೋಟಿಗೂ ಹೆಚ್ಚು ಮತದಾರರ ಅರ್ಜಿಗಳು ಅಪ್ಲಿಕೇಷನ್ ನಲ್ಲಿ ಅಪ್ಲೋಡ್ ಆಗಿವೆ.
ರಾಜ್ಯದ 1 ಲಕ್ಷಕ್ಕೂ ಹೆಚ್ಚು BLO ಗಳು ಈಗಾಗಲೇ ಎರಡು ಸುತ್ತಿನ ಮನೆ-ಮನೆ ಭೇಟಿ ಪೂರ್ಣಗೊಳಿಸಿದ್ದು, ಮೂರನೇ ಸುತ್ತಿನ ಅಭಿಯಾನ ಆರಂಭಿಸಲು ಸಿದ್ಧರಾಗಿದ್ದಾರೆ. ಈ ಕಾರ್ಯಕ್ಕೆ 1.5 ಲಕ್ಷ BLA (ಬೂತ್ ಮಟ್ಟದ ಏಜೆಂಟ್ಗಳು) ಸಹ ಸಹಕಾರ ನೀಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ, 5,683 ವಾರ್ಡ್ ಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಕೈಬಿಡಲಾಗದಂತೆ ಕ್ರಮ ಕೈಗೊಳ್ಳಲಾಗಿದೆ.







