Maharashtra | ಟ್ರಕ್ ಚಾಲಕನಿಗೆ ಬಲವಂತವಾಗಿ ಸಗಣಿ ತಿನ್ನಲು ಒತ್ತಾಯಿಸಿದ ಆರೋಪ: ನಾಲ್ವರು ಸ್ವಯಂ ಘೋಷಿತ ಗೋರಕ್ಷಕರ ವಿರುದ್ಧ ಪ್ರಕರಣ ದಾಖಲು

PC | thewire
ಹೊಸದಿಲ್ಲಿ: ಟ್ರಕ್ ಚಾಲಕನಿಗೆ ಸಗಣಿ ತಿನ್ನುವಂತೆ ಒತ್ತಾಯಿಸಿರುವ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಸ್ವಯಂ ಘೋಷಿತ ಗೋರಕ್ಷಕರ ವಿರುದ್ಧ ಮಹಾರಾಷ್ಟ್ರದ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟ್ರಕ್ ಚಾಲಕನ ಧರ್ಮದ ಕುರಿತು ಅವಮಾನಕರ ಕಮೆಂಟ್ ಗಳನ್ನು ಮಾಡುವುದು, ಅವನನ್ನು ಥಳಿಸುವುದು ಮತ್ತು ಸಗಣಿ ತಿನ್ನಲು ಒತ್ತಾಯಿಸುವ ದೃಶ್ಯಗಳು ಇದರಲ್ಲಿ ಕಂಡುಬರುತ್ತಿವೆ ಎಂದು ಹೇಳಲಾಗಿದೆ.
ಪುಣೆ ಜಿಲ್ಲೆಯ ಅಂಬೆಗಾಂವ್ ಪೊಲೀಸ್ ಠಾಣೆಯಲ್ಲಿ ರವಿವಾರ ಮಾರ್ಚ್ 8ರಂದು ಈ ಸಂಬಂಧ ಪ್ರಕರಣ ದಾಖಲಾಗಿದೆ. ಎಮ್ಮೆಗಳನ್ನು ಸಾಗಿಸಿದ ಆರೋಪದ ಮೇಲೆ ಟ್ರಕ್ ಚಾಲಕನ ವಿರುದ್ಧವೂ ಪೊಲೀಸರು ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಶುಕ್ರವಾರ ಮಾರ್ಚ್ 6ರಂದು ಎಮ್ಮೆಗಳನ್ನು ಸಾಗಿಸುತ್ತಿದ್ದ ಟ್ರಕ್ ನೊಂದಿಗೆ ಸ್ವಯಂ ಘೋಷಿತ ಗೋರಕ್ಷಕರು ಮೊದಲು ಚಾಲಕನನ್ನು ಅಂಬೆಗಾಂವ್ ಪೊಲೀಸ್ ಠಾಣೆಗೆ ಕರೆತಂದಿದ್ದರು. ವಾಹನವನ್ನು ಪರಿಶೀಲಿಸಿದ ಬಳಿಕ ಪೊಲೀಸರು ಟ್ರಕ್ ಚಾಲಕನ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದರ ನಡುವೆಯೇ ಸ್ವಯಂ ಘೋಷಿತ ಗೋರಕ್ಷಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟ್ರಕ್ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಪೊಲೀಸರ ವರದಿಯಲ್ಲಿ ಚಾಲಕನಿಗೆ ಬಲವಂತವಾಗಿ ಸಗಣಿ ತಿನ್ನಿಸಲಾಯಿತು ಎಂಬುದನ್ನು ಉಲ್ಲೇಖಿಸಿಲ್ಲ.
ಆದರೆ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅದರಲ್ಲಿ ಸ್ವಯಂ ಘೋಷಿತ ಗೋರಕ್ಷಕರು ಟ್ರಕ್ ಚಾಲಕನ ಧರ್ಮದ ಕುರಿತು ಅವಮಾನಕರ ಕಮೆಂಟ್ಗಳನ್ನು ಮಾಡುತ್ತಿರುವುದು, ಅವನನ್ನು ದೈಹಿಕವಾಗಿ ನಿಂದಿಸುವುದು ಮತ್ತು ಸಗಣಿ ತಿನ್ನಲು ಒತ್ತಾಯಿಸುವುದು ಕಂಡುಬರುತ್ತಿದೆ ಎಂದು ಹೇಳಲಾಗಿದೆ.
ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಅದನ್ನು ವೀಕ್ಷಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ವಿವಿಧ ವಿಧಿಗಳ ಅಡಿಯಲ್ಲಿ ನಾಲ್ವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಎನ್ಎಸ್ ಸೆಕ್ಷನ್ 196 (ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು), 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು), 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
‘ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯ ನಡೆಯುತ್ತಿದೆ’ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಶರದ್ ಜೈನ್ ತಿಳಿಸಿದ್ದಾರೆ.
ಸೌಜನ್ಯ: thewire.in







