ಮಧ್ಯಪ್ರದೇಶ | ಸುಪ್ರೀಂ ಕೋರ್ಟ್ ಎಚ್ಚರಿಕೆಯ ಬಳಿಕ ಆದಿವಾಸಿ ವ್ಯಕ್ತಿಯ ಲಾಕಪ್ ಡೆತ್ ಪ್ರಕರಣದ ಆರೋಪಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ

ಸಾಂದರ್ಭಿಕ ಚಿತ್ರ | PTI
ಭೋಪಾಲ್: ಜುಲೈ 2024ರಲ್ಲಿ ಆದಿವಾಸಿ ವ್ಯಕ್ತಿಯೊಬ್ಬರಿಗೆ ಲಾಕಪ್ ನಲ್ಲಿ ಕಿರುಕುಳ ನೀಡಿ, ಆತನ ಸಾವಿಗೆ ಕಾರಣವಾದ ಆರೋಪವನ್ನು ಎದುರಿಸುತ್ತಿರುವ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರನ್ನು ಶನಿವಾರ ಸಿಬಿಐ ಬಂಧಿಸಿದೆ.
25 ವರ್ಷದ ಆದಿವಾಸಿ ಯುವಕ ದೇವ ಪರ್ಧಿ ಸಾವು ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಕ್ಟೋಬರ್ 7ರ ಒಳಗೆ ಬಂಧಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಚಾಲನೆ ನೀಡಲಾಗುವುದು ಎಂದು ಸಿಬಿಐ ಹಾಗೂ ಮಧ್ಯಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ ಬೆನ್ನಿಗೇ ಈ ಬಂಧನ ನಡೆದಿದೆ.
ಈ ಘಟನೆ ನಡೆದಾಗ ಗುನಾ ಜಿಲ್ಲೆಯ ಮೈಯಾನ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಉತ್ತಮ್ ಸಿಂಗ್ ಕುಶ್ವಾಹರನ್ನು ಬಂಧಿಸಲಾಗಿದೆ ಎಂದು ಸಿಬಿಐನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಶ್ರೀವಾಸ್ತವ ತಿಳಿಸಿದ್ದಾರೆ.
ಉತ್ತಮ್ ಸಿಂಗ್ ಕುಶ್ವಾಹರನ್ನು ನ್ಯಾಯಾಲಯದೆದುರು ಹಾಜರುಪಡಿಸುವುದಕ್ಕೂ ಮುನ್ನ, ಎರಡು ದಿನಗಳ ಕಾಲ ವಶಕ್ಕೆ ಪಡೆಯಲಾಗಿತ್ತು ಎಂದು ಶ್ರೀವಾಸ್ತವ ಹೇಳಿದ್ದಾರೆ. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಠಾಣಾಧಿಕಾರಿಯಾಗಿದ್ದ ಸಂಜಿತ್ ಸಿಂಗ್ ಮವಾಯಿ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.







