90 ಡಿಗ್ರಿ ಫ್ಲೈಓವರ್ ನಂತರ, ಭೋಪಾಲ್ ನಲ್ಲಿ ವಿವಾದದ ಕೇಂದ್ರ ಬಿಂದುವಾದ ಹಾವಿನ ಆಕಾರದ ಸೇತುವೆ!

Photo credit: indiatoday.in
ಭೋಪಾಲ್: ಇಲ್ಲಿನ ಐಶ್ಬಾಗ್ ಸೇತುವೆಯ 90 ಡಿಗ್ರಿ ತಿರುವಿನ ಮೇಲ್ಸೇತುವೆಯ ವಿವಾದ ಕೊನೆಗೊಳ್ಳುವ ಮುನ್ನವೇ, ಭೋಪಾಲ್ ನಗರದಲ್ಲಿ ಹಾವಿನಾಕಾರದ ಮತ್ತೊಂದು ಅಪಾಯಕಾರಿ ಸೇತುವೆ ಮತ್ತು ಅದರಲ್ಲಿ ಇಡಲಾದ ಅವ್ಯವಸ್ಥಿತ ಡಿವೈಡರ್ ವಿವಾದದ ಕೇಂದ್ರ ಬಿಂದುವಾಗಿದೆ. ಸುಭಾಷ್ ನಗರ ರೈಲ್ವೆ ಓವರ್ ಬ್ರಿಡ್ಜ್ (ROB) ನಲ್ಲಿ ಕೇವಲ ಎಂಟು ಗಂಟೆಗಳೊಳಗೆ ಸಂಭವಿಸಿದ ಎರಡು ಅಪಘಾತಗಳು ಸಂಭವಿಸಿರುವುದು, ಸೇತುವೆಯ ವಿನ್ಯಾಸದಲ್ಲಿನ ಲೋಪಗಳನ್ನು ಹೊರಹಾಕಿದೆ. ಇದು ಸಾರ್ವಜನಿಕರಲ್ಲಿ ಭೀತಿಯನ್ನು ಉಂಟುಮಾಡಿವೆ ಎಂದು indiatoday.in ವರದಿ ಮಾಡಿದೆ.
40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲ್ವೆ ಓವರ್ ಬ್ರಿಡ್ಜ್, ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಮೈದಾ ಮಿಲ್ ಮತ್ತು ಪ್ರಭಾತ್ ಪೆಟ್ರೋಲ್ ಪಂಪ್ ನಡುವಿನ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಭೋಪಾಲ್ ರೈಲ್ವೆ ನಿಲ್ದಾಣದತ್ತ ಸಾಗುವ ಪ್ರಮುಖ ಮಾರ್ಗವನ್ನೂ ಈ ಸೇತುವೆ ಸಂಪರ್ಕಿಸುತ್ತದೆ. ಸಂಚಾರ ದಟ್ಟಣೆ ನಿವಾರಣೆಗೆ ನೆರವಾಗಬೇಕಾದ ಈ ಸೇತುವೆ, ಇದೀಗ ಅವಘಡಗಳ ತಾಣವಾಗಿ ಮಾರ್ಪಾಡಾಗಿದೆ.
ಇತ್ತೀಚೆಗೆ ಸಂಭವಿಸಿದ ಎರಡೂ ಅಪಘಾತಗಳು ಸೇತುವೆಯ ತೀವ್ರ ತಿರುವುಗಳಲ್ಲೇ ಸಂಭವಿಸಿದ್ದು, ವಾಹನಗಳು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದಿವೆ. ಒಂದು ಅಪಘಾತದಲ್ಲಿ ಕಾರು ಕಡಿದಾದ ತಿರುವಿನಲ್ಲಿ ವಿಭಜಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದರೆ, ಮತ್ತೊಂದು ಅಪಘಾತದಲ್ಲಿ ಶಾಲಾ ವ್ಯಾನ್ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ.
ಅಪಘಾತಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ, ಭವಿಷ್ಯದಲ್ಲಿ ಭಾರಿ ದುರಂತ ಸಂಭವಿಸುವ ಸಾಧ್ಯತೆಯನ್ನು ಈ ಘಟನೆಗಳು ತೋರಿಸುತ್ತಿವೆ.
ಸೇತುವೆಯನ್ನು ಹಾವಿನಾಕರವಾಗಿ ವಿನ್ಯಾಸ ಮಾಡಿರುವುದರಿಂದ ಕೆಲವೇ ಸೆಕೆಂಡುಗಳಲ್ಲಿ ಚಾಲಕರು ನಾಲ್ಕು ತೀವ್ರ ತಿರುವುಗಳನ್ನು (ಬಲ, ಎಡ, ಪುನಃ ಬಲ, ಮತ್ತೆ ಎಡ) ದಾಟ ಬೇಕಾಗುತ್ತದೆ. ತ್ವರಿತ ತಿರುವುಗಳಿರುವುದರಿಂದ ಚಾಲಕರಿಗೆ ಒಮ್ಮೆಲೆ ತಿರುವುಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಇದು ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಅಲ್ಲದೆ ಸೇತುವೆಯ ಮೇಲೆ ಡಿವೈಡರ್ ಗಳನ್ನು ಅಪಾಯಕಾರಿಯಾಗಿ ಮಾಡಲಾಗಿದೆ. ಮೈದಾ ಮಿಲ್ ಕಡೆಗೆ ಇಳಿಯುವ ತಿರುವಿನಲ್ಲಿ ತಕ್ಷಣವೇ ಡಿವೈಡರ್ ಸ್ಥಾಪಿಸಲಾಗಿದೆ. ಇದನ್ನು ಚಾಲಕರು ಮುಂಚಿತವಾಗಿ ಗುರುತಿಸುವುದು ಕಷ್ಟ, ವಿಶೇಷವಾಗಿ ಹೆಚ್ಚಿನ ವೇಗದಲ್ಲಿ ಅಥವಾ ರಾತ್ರಿ ಸಮಯದಲ್ಲಿ ಚಾಲನೆಯಲ್ಲಿರುವಾಗ ಅಪಘಾತದ ಅಪಾಯ ಹೆಚ್ಚಾಗುತ್ತದೆ ಎಂದು indiatoday.in ವರದಿ ಮಾಡಿದೆ.
ಕಡಿಮೆ ಎತ್ತರದ ಡಿವೈಡರ್ ಗಳನ್ನು ಮಾಡಿರುವುದರಿಂದ ಚಾಲಕರಿಗೆ ಒಮ್ಮೆಲೆ ಗಮನಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅಪಘಾತದ ಅಪಾಯ ಇನ್ನಷ್ಟು ಹೆಚ್ಚಾಗಿದೆ.
ಸಂಚಾರ ಸಿಗ್ನಲ್ ಸಮಸ್ಯೆಯಿಂದ ಪ್ರಭಾತ್ ಪೆಟ್ರೋಲ್ ಪಂಪ್ ಕಡೆಗೆ ಸಾಗುವ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ.
ಸೇತುವೆಯ ವಿನ್ಯಾಸದ ಬಗ್ಗೆ ರಚನಾತ್ಮಕ ಇಂಜಿನಿಯರ್ ಹಾಗೂ ಸೇತುವೆ ತಜ್ಞ ಪ್ರಖರ್ ಪಗಾರಿಯಾ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹಾವಿನ ಆಕಾರದ ವಿನ್ಯಾಸಗಳು ಅಪಾಯಕಾರಿ. ಅವುಗಳನ್ನು ಸ್ಥಳಾವಕಾಶದ ಕೊರತೆ ಇದ್ದಾಗ, ಬೇರೆ ಪರ್ಯಾಯ ಮಾರ್ಗಗಳು ಇಲ್ಲದಾಗ ಸಂದರ್ಭಗಳಲ್ಲಿ ಮಾತ್ರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
"ಇಂತಹ ವಿನ್ಯಾಸಗಳಲ್ಲಿ ತಿರುವುಗಳ ಕೋನ, ವಿಭಾಜಕಗಳ ಸ್ಥಾನ ನಿರ್ವಹಣೆ ಅತ್ಯಂತ ಸೂಕ್ಷ್ಮವಾಗಿರಬೇಕು. ವಿಶೇಷವಾಗಿ ರಾತ್ರಿ ವೇಳೆ ಚಾಲಕರಿಗೆ ಸೂಕ್ತ ಪ್ರತಿಕ್ರಿಯೆಗೆ ಸಮಯ ನೀಡದ ತೀವ್ರ ತಿರುವುಗಳು ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರು, ತಜ್ಞರು ಈ ಸೇತುವೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.