ಉತ್ತರ ಪ್ರದೇಶ | ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ತೆರೆದಿಟ್ಟು ಸಿಬ್ಬಂದಿಗಳಿಂದ ಪ್ರತಿಭಟನೆ

Photo credit: NDTV
ಹೊಸದಿಲ್ಲಿ : ದೀಪಾವಳಿ ಬೋನಸ್ ಕಡಿಮೆ ಬಂದ ಕಾರಣ ಉತ್ತರ ಪ್ರದೇಶದ ಫತೇಹಾಬಾದ್ನಲ್ಲಿರುವ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿರುವ ಟೋಲ್ ಪ್ಲಾಝಾದ ಸಿಬ್ಬಂದಿಗಳು ಟೋಲ್ ತೆರೆದು ಕೆಲಸವನ್ನು ಬಹಿಷ್ಕರಿಸಿದರು. ಇದರಿಂದ ಸಾವಿರಾರು ವಾಹನಗಳು ಟೋಲ್ ಪಾವತಿಸದೆ ಸಾಗಿದೆ. ನೌಕರರ ಪ್ರತಿಭಟನೆ ಟೋಲ್ ಕಾರ್ಯಾಚರಣೆ ಮತ್ತು ಸಂಚಾರದಲ್ಲಿ ದೊಡ್ಡ ಅಡಚಣೆಯನ್ನುಂಟುಮಾಡಿತು. ಕೊನೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಶ್ರೀ ಸೈನ್ & ದಾತಾರ್ ಕಂಪೆನಿ ಫತೇಹಾಬಾದ್ ನಲ್ಲಿ ಟೋಲ್ ಪ್ಲಾಝಾವನ್ನು ನಿರ್ವಹಿಸುತ್ತಿದೆ. ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ಕೇವಲ 1,100ರೂ.ಗಳನ್ನು ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡು ಟೋಲ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ಸಾವಿರಾರು ವಾಹನಗಳು ಶುಲ್ಕ ಪಾವತಿಸದೆ ತೆರಳುತ್ತಿರುವುದನ್ನು ಗಮನಿಸಿದ ಟೋಲ್ ಆಡಳಿತ ಮಂಡಳಿಯು ಇತರ ಟೋಲ್ ಪ್ಲಾಝಾಗಳಿಂದ ಸಿಬ್ಬಂದಿಯನ್ನು ಕರೆತಂದು ಕಾರ್ಯಾಚರಣೆಯನ್ನು ಮುಂದುವರಿಸಲು ಪ್ರಯತ್ನಿಸಿತು. ಆದರೆ ಪ್ರತಿಭಟನಾ ನಿರತ ಸಿಬ್ಬಂದಿಗಳು ಬದಲಿ ನೌಕರರನ್ನು ಕೆಲಸ ಮಾಡದಂತೆ ತಡೆದರು. ಇದರಿಂದ ಮತ್ತಷ್ಟು ಸಮಸ್ಯೆ ಎದುರಾಯಿತು.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಟೋಲ್ ಪ್ಲಾಝಾಗೆ ತೆರಳಿ ಕಂಪೆನಿಯ ಅಧಿಕಾರಿಗಳು ಮತ್ತು ಪ್ರತಿಭಟನಾನಿರತ ಸಿಬ್ಬಂದಿಗಳ ನಡುವೆ ಮಾತುಕತೆ ನಡೆಸಿದರು. ಕಂಪೆನಿಯ ಅಧಿಕಾರಿಗಳು ಶೇಕಡಾ 10ರಷ್ಟು ವೇತನ ಹೆಚ್ಚಳದ ಭರವಸೆ ನೀಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆ ಬಳಿಕ ನೌಕರರು ತಮ್ಮ ಕೆಲಸಕ್ಕೆ ಮರಳಿದರು.







