ಅನಧಿಕೃತ ವಾಸ್ತವ್ಯ ಪ್ರಕರಣ| ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್ಪಾಲ್ ವಿರುದ್ಧ 1.63 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ

ದುರ್ಗಾ ಶಕ್ತಿ ನಾಗ್ಪಾಲ್ (Photo: X/ @DurgaShaktiIAS)
ಹೊಸದಿಲ್ಲಿ: ದಿಲ್ಲಿಯ ಪುಸಾ ಕ್ಯಾಂಪಸ್ ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ತನ್ನ ಸರ್ಕಾರಿ ವಸತಿ ಗೃಹದಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿದ ಆರೋಪದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್ಪಾಲ್ ಅವರಿಂದ 1.63 ಕೋಟಿ ಪರಿಹಾರ ಪಾವತಿಸುವಂತೆ ಕೇಳಿದೆ.
2010ರ ಬ್ಯಾಚ್ನ ಉತ್ತರ ಪ್ರದೇಶ ಕೇಡರ್ನ ಈ ಅಧಿಕಾರಿ ಪ್ರಸ್ತುತ ಲಖಿಂಪುರ ಖೇರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇ 2022ರಿಂದ ಫೆಬ್ರವರಿ 2025ರವರೆಗೆ ಅಧಿಕೃತ ವಸತಿಯನ್ನು ಖಾಲಿ ಮಾಡದ ಹಿನ್ನೆಲೆಯಲ್ಲಿ IARI ಈ ಮೊತ್ತವನ್ನು ಪಾವತಿಸಲು ನೋಟಿಸ್ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ದುರ್ಗಾ ಶಕ್ತಿ ನಾಗ್ಪಾಲ್, ತಮ್ಮ ಪೋಷಕರ ಆರೋಗ್ಯ ಸಮಸ್ಯೆಯಿಂದ ವಸತಿ ಖಾಲಿ ಮಾಡುವಲ್ಲಿ ವಿಳಂಬವಾಗಿದ್ದು, ವಿಸ್ತರಣೆಗೆ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. “ನಾನು ಅನುಮತಿ ಪಡೆದು ಬಾಡಿಗೆಯನ್ನೂ ಪಾವತಿಸಿದ್ದೆ. ದಾಖಲೆಗಳಲ್ಲಿ ಉಂಟಾದ ತಪ್ಪು ಸಂವಹನದಿಂದ ದಂಡ ವಿಧಿಸಲಾಗಿದೆ. ಅದರ ಮನ್ನಾ ಪ್ರಕ್ರಿಯೆ ಪ್ರಗತಿಯಲ್ಲಿದೆ,” ಎಂದು ಅವರು ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
2015ರಲ್ಲಿ ಅವರು ಆಗಿನ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರ ಕಚೇರಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿ (OSD) ಆಗಿದ್ದ ಸಂದರ್ಭದಲ್ಲಿ ದುರ್ಗಾ ಶಕ್ತಿ ನಾಗ್ಪಾಲ್ ಅವರಿಗೆ ಟೈಪ್ VI-A ವರ್ಗದ ಬಂಗಲೆ (B-17) ಅವರಿಗೆ ಹಂಚಿಕೆ ಮಾಡಲಾಗಿತ್ತು.
ನಾಗ್ಪಾಲ್ ಅವರಿಗೆ ಮಾರ್ಚ್ 2015ರಲ್ಲಿ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರ ಆನ್ ಸ್ಪೆಷಲ್ ಡ್ಯೂಟಿ (OSD) ಆಗಿ ನೇಮಕಗೊಂಡ ನಂತರ ಪುಸಾ ಕ್ಯಾಂಪಸ್ನ ಬಿ-17 (ಟೈಪ್ VI-A) ಬಂಗಲೆಯನ್ನು ವಸತಿಯಾಗಿ ನೀಡಲಾಗಿತ್ತು. ಅವರು ತಿಂಗಳಿಗೆ 6,600 ರೂಪಾಯಿ ಬಾಡಿಗೆಯನ್ನು ಪಾವತಿಸಿ ಏಪ್ರಿಲ್ 2015ರಲ್ಲಿ ವಾಸ್ತವ್ಯ ಹೂಡಿದ್ದರು.
ಅವರ ಕೇಂದ್ರದ ನಿಯೋಜನೆ ಮೇ 2019ರಲ್ಲಿ ಮುಗಿದರೂ, ಅವರು ವಾಣಿಜ್ಯ ಸಚಿವಾಲಯದ ಸೇವೆ ಮತ್ತು ನಂತರ ಉತ್ತರ ಪ್ರದೇಶ ಕೇಡರ್ ಗೆ ಮರಳಿದ ಬಳಿಕವೂ ಬಂಗಲೆಯಲ್ಲಿ ವಾಸ ಮುಂದುವರಿಸಿದರು. IARI ಹಲವು ಬಾರಿ ಮನೆಯನ್ನು ಖಾಲಿ ಮಾಡಲು ಸೂಚಿಸಿದರೂ, ಅವರು ಫೆಬ್ರವರಿ 2025ರವರೆಗೆ ಅಲ್ಲಿಯೇ ವಾಸಿಸಿದ್ದರು ಎಂದು ತಿಳಿದು ಬಂದಿದೆ.
IARI 2020ರಿಂದಲೇ ನಾಗ್ಪಾಲ್ ಅವರನ್ನು ಮನೆಯನ್ನು ಖಾಲಿ ಮಾಡಲು ಒತ್ತಾಯಿಸಿತು. 2022ರಲ್ಲಿ ತೆರವು ಪ್ರಕ್ರಿಯೆ ಆರಂಭಿಸಿ, ಅನೇಕ ನೋಟಿಸ್ಗಳು ಮತ್ತು ಸಮನ್ಸ್ಗಳನ್ನು ನೀಡಿತು. ಅಂತಿಮವಾಗಿ, ಫೆಬ್ರವರಿ 2025ರಲ್ಲಿ ದಿಲ್ಲಿ ಪೊಲೀಸರ ನೆರವಿನಿಂದ ಬಂಗಲೆಯನ್ನು ಮರುಸ್ವಾಧೀನಪಡಿಸಿಕೊಂಡಿತು.
ಮೇ 2ರಂದು ನೀಡಿದ ನೋಟಿಸ್ನಲ್ಲಿ ಮೇ 2022ರಿಂದ ಫೆಬ್ರವರಿ 2025ರವರೆಗೆ 1,63,57,550 ರೂಪಾಯಿ ಮೊತ್ತದ ಹಾನಿ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರದ ವಸತಿ ನಿಯಮಾವಳಿಗಳ ಪ್ರಕಾರ ಲೆಕ್ಕ ಹಾಕಲಾಗಿದೆ.
ಈ ಮೊತ್ತವನ್ನು ಸರ್ಕಾರಿ ಮಾನದಂಡಗಳ ಪ್ರಕಾರ ಲೆಕ್ಕ ಹಾಕಲಾಗಿದ್ದು, ಟೈಪ್ VI-A ವಸತಿಗೆ ಪರವಾನಗಿ ಶುಲ್ಕದ 50 ಪಟ್ಟು ಹಾನಿ ದರ ಹಾಗೂ ನೀರಿನ ಶುಲ್ಕ 1,840 ರೂಪಾಯಿ ಸೇರಿ ಲೆಕ್ಕ ಹಾಕಲಾಗಿದೆ.
ಮಾರ್ಚ್ 2022ರ ಬಳಿಕ ಅನಧಿಕೃತ ವಾಸ್ತವ್ಯ ಮುಂದುವರಿದ ಕಾರಣ ದಂಡದ ಪ್ರಮಾಣ ತಿಂಗಳವಾರು ಹೆಚ್ಚಿಸಲಾಯಿತು.ಎರಡನೇ ತಿಂಗಳು 1,01,200 ರೂಪಾಯಿ(10% ಹೆಚ್ಚಳ), ಮೂರನೇ ತಿಂಗಳು 1,10,400 ರೂಪಾಯಿ(20% ಹೆಚ್ಚಳ), ಐದನೇ ತಿಂಗಳು 1,65,600 ರೂಪಾಯಿ (80% ಹೆಚ್ಚಳ), ಆರನೇ ತಿಂಗಳು 2,39,200 ರೂಪಾಯಿ(160% ಹೆಚ್ಚಳ), ಎಂಟನೇ ತಿಂಗಳಿನಿಂದ 4.6 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ ಹೆಚ್ಚಳ ಮಾಡಲಾಗಿತ್ತು.
ತಮ್ಮ ತಂದೆಯ ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ತಾಯಿಯ knee replacement ಚಿಕಿತ್ಸೆ ಹಿನ್ನೆಲೆಯಲ್ಲೇ ವಾಸ್ತವ್ಯ ವಿಸ್ತರಣೆಯನ್ನು ಕೋರಿದ್ದಾಗಿ ನಾಗ್ಪಾಲ್ ತಿಳಿಸಿದ್ದಾರೆ.
ನಾಗ್ಪಾಲ್ ಅವರು ಈ ಮೊತ್ತವನ್ನು ಅತಿಯಾದ ಮೊತ್ತ ಎಂದು ಹೇಳಿ ಮನ್ನಾ ಕೋರಿ ವಿನಂತಿ ಸಲ್ಲಿಸಿದ್ದು, “ರಾಜ್ಯ ಸರ್ಕಾರವು ನನ್ನ ಮನವಿಯನ್ನು ಪರಿಗಣಿಸಿ ಸಚಿವಾಲಯಕ್ಕೆ ಪತ್ರ ಬರೆದಿದೆ,” ಎಂದು ಹೇಳಿದ್ದಾರೆ.
IARI ಅಧಿಕಾರಿಗಳು, ಸಂಸ್ಥೆಯ ವಸತಿ ಕೊರತೆಯಿಂದ ವಿಜ್ಞಾನಿಗಳ ವಸತಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣ ಪ್ರಸ್ತುತ ಕೇಂದ್ರ ಕೃಷಿ ಸಚಿವಾಲಯದ ಪರಿಗಣನೆಯಲ್ಲಿದೆ.
ದುರ್ಗಾ ಶಕ್ತಿ ನಾಗ್ಪಾಲ್ 2013ರಲ್ಲಿ ಉತ್ತರ ಪ್ರದೇಶದಲ್ಲಿ ಮರಳು ಮಾಫಿಯಾ ವಿರುದ್ಧದ ಕ್ರಮದಿಂದಲೇ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದರು.







