ಅಹಮದಾಬಾದ್| ಮೇಲ್ಮನವಿ ವಜಾಗೊಳಿಸಿದ್ದಕ್ಕೆ ಆಕ್ರೋಶ: ನ್ಯಾಯಾಧೀಶರತ್ತ ಚಪ್ಪಲಿ ಎಸೆದ ವ್ಯಕ್ತಿ

ಸಾಂದರ್ಭಿಕ ಚಿತ್ರ
ಅಹಮದಾಬಾದ್: ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ, ನ್ಯಾಯಾಧೀಶರು ನೀಡಿದ ತೀರ್ಪಿನಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ನ್ಯಾಯಾಧೀಶರತ್ತ ಚಪ್ಪಲಿ ತೂರಿರುವ ಘಟನೆ ಮಂಗಳವಾರ ಅಹಮದಾಬಾದ್ ನ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ನ್ಯಾಯಾಧೀಶರ ಸೂಚನೆಯ ಮೇರೆಗೆ, ಈ ಪ್ರಕರಣದಲ್ಲಿ ಮೇಲ್ಮನವಿದಾರನಾಗಿದ್ದ ವ್ಯಕ್ತಿಯ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಲಿಲ್ಲ ಹಾಗೂ ಆತನನ್ನು ನ್ಯಾಯಾಲಯದಿಂದ ಹೊರ ಹೋಗಲು ಅವಕಾಶ ನೀಡಲಾಯಿತು ಎಂದು ಅಹಮದಾಬಾದ್ ನ ಕಾರಂಜ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ.ಎಚ್.ಭಾಟಿ ಹೇಳಿದ್ದಾರೆ.
“ತನ್ನ ಮೇಲ್ಮನವಿ ವಜಾಗೊಂಡ ನಂತರ ಕುಪಿತನಾದ ಮೇಲ್ಮನವಿದಾರನು ನ್ಯಾಯಾಧೀಶರತ್ತ ಚಪ್ಪಲಿ ಎಸೆದ. ಆತನನ್ನು ನ್ಯಾಯಾಲಯದ ಸಿಬ್ಬಂದಿಗಳು ಸೆರೆ ಹಿಡಿದರಾದರೂ, ಆತನನ್ನು ನ್ಯಾಯಾಲಯದಿಂದ ಹೊರ ಹೋಗಲು ಅವಕಾಶ ನೀಡಿದ ನ್ಯಾಯಾಧೀಶರು, ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಾದಂತೆ ನ್ಯಾಯಾಲಯದ ಸಿಬ್ಬಂದಿಗಳಿಗೆ ಸೂಚಿಸಿದರು” ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲರೊಬ್ಬರು ಶೂ ಎಸೆಯಲು ಪ್ರಯತ್ನಿಸಿದ್ದರು. ಆದರೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಆತನ ಬಿಡುಗಡೆಗೆ ಆದೇಶಿಸಿದ್ದರಲ್ಲದೆ, ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆಯೂ ನಿರ್ದೇಶನ ನೀಡಿದ್ದರು.







