ಅಹ್ಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ | ಪ್ರಾಥಮಿಕ ವರದಿ ಸಲ್ಲಿಸಿದ ತನಿಖಾ ತಂಡ

PC : PTI
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ತಂಡವು ತನ್ನ ಪ್ರಾಥಮಿಕ ವರದಿಯನ್ನು ನಾಗರಿಕ ವಾಯುಯಾನ ಸಚಿವಾಲಯಕ್ಕೆ ಸಲ್ಲಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜೂನ್ 12ರಂದು ನಡೆದ ದುರಂತದಲ್ಲಿ, ವಿಮಾನದ ಒಳಗೆ ಮತ್ತು ಹೊರಗಿದ್ದವರು ಸೇರಿ 260 ಮಂದಿ ಮೃತಪಟ್ಟಿದ್ದಾರೆ.
ಆದರೆ, ವಿಮಾನ ಅಪಘಾತ ತನಿಖಾ ಬ್ಯೂರೋದ ತನಿಖೆಗಾರರು ಸಲ್ಲಿಸಿರುವ ವರದಿಯಲ್ಲಿ ಏನಿದೆ ಎನ್ನುವುದು ಬಹಿರಂಗವಾಗಿಲ್ಲ.
ಅಹ್ಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 242 ಮಂದಿಯನ್ನು ಹೊತ್ತು ಲಂಡನ್ ಗೆ ಹೊರಟ ವಿಮಾನವು ವಿಮಾನ ನಿಲ್ದಾಣದ ಆವರಣವನ್ನು ದಾಟುತ್ತಿದ್ದಂತೆಯೇ ಮೇಘನಿನಗರದಲ್ಲಿರುವ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತು. ಆಗ ಒಮ್ಮೆಲೆ ಭುಗಿಲೆದ್ದ ಬೆಂಕಿಯು ವಿಮಾನದಲ್ಲಿದ್ದ 241 ಮಂದಿಯನ್ನು ಕ್ಷಣಗಳಲ್ಲಿ ಸುಟ್ಟು ಹಾಕಿತು. ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಬದುಕುಳಿದರು. ಜೊತೆಗೆ, ವಿಮಾನದ ಹೊರಗಿದ್ದ 19 ಮಂದಿಯೂ ಪ್ರಾಣ ಕಳೆದುಕೊಂಡರು.
ವಿಮಾನದ ಮುಂಭಾಗದ ಬ್ಲ್ಯಾಕ್ ಬಾಕ್ಸ್ ನಿಂದ ‘ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್’ (ಸಿಪಿಎಮ್)ನ್ನು ಸುಭದ್ರವಾಗಿ ಪಡೆದುಕೊಳ್ಳಲಾಗಿದೆ ಹಾಗೂ ಜೂನ್ 25ರಂದು ಎಎಐಬಿ ಪ್ರಯೋಗಾಲಯದಲ್ಲಿ ಮೆಮರಿ ಮಾಡ್ಯೂಲ್ನ್ನು ಯಶಸ್ವಿಯಾಗಿ ತೆರೆಯಲಾಗಿದೆ ಮತ್ತು ಅದರಲ್ಲಿರುವ ದತ್ತಾಂಶವನ್ನು ಸ್ವೀಕರಿಸಲಾಗಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯ ತಿಳಿಸಿದೆ.
ದತ್ತಾಂಶವನ್ನು ಯಶಸ್ವಿಯಾಗಿ ಸ್ವೀಕರಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಲು ‘ಗೋಲ್ಡನ್ ಚಾಸಿಸ್’ ಎಂಬುದಾಗಿ ಕರೆಯಲ್ಪಡುವ ನಕಲಿ ಬ್ಲ್ಯಾಕ್ ಬಾಕ್ಸ್ ಒಂದನ್ನು ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ಬ್ಲ್ಯಾಕ್ಬಾಕ್ಸ್ ಜೂನ್ 13ರಂದು ಅಪಘಾತ ಸ್ಥಳದಲ್ಲಿರುವ ಕಟ್ಟಡವೊಂದರಲ್ಲಿ ಪತ್ತೆಯಾಗಿತ್ತು ಮತ್ತು ಎರಡನೇ ಬ್ಲ್ಯಾಕ್ಬಾಕ್ಸ್ ಜೂನ್ 16ರಂದು ಅವಶೇಷಗಳಡಿಯಿಂದ ಹೊರದೆಗೆಯಲಾಗಿತ್ತು.







