ಅಹಮದಾಬಾದ್ ಏರ್ ಇಂಡಿಯಾ ದುರಂತ | ಮೃತ ಏರ್ ಇಂಡಿಯಾ ಪೈಲಟ್ ಸಂಬಂಧಿಗೆ ಸಮನ್ಸ್; ಪೈಲಟ್ ಗಳ ಪ್ರತಿಭಟನೆ

Photo Credit : PTI
ಹೊಸದಿಲ್ಲಿ: ಏರ್ ಇಂಡಿಯಾ 171 ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗೆ ಹಾಜರಾಗುವಂತೆ ಮೃತ ಕ್ಯಾಪ್ಟನ್ ಸುಮೀತ್ ಸಭರ್ ವಾಲ್ ಅವರ ಸೋದರಳಿಯ ಕ್ಯಾಪ್ಟನ್ ವರುಣ್ ಆನಂದ್ ಗೆ ವಿಮಾನ ಅಪಘಾತ ತನಿಖಾ ದಳ (AAIB) ಸಮನ್ಸ್ ಜಾರಿಗೊಳಿಸಿದ್ದು, ಈ ಕ್ರಮದ ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ವಿಮಾನ ಅಪಘಾತ ತನಿಖಾ ದಳಕ್ಕೆ ಕಾನೂನು ನೋಟಿಸ್ ಅನ್ನು ರವಾನಿಸಿರುವ ಭಾರತೀಯ ಪೈಲಟ್ ಗಳ ಒಕ್ಕೂಟ, ಈ ಕ್ರಮ ಸಂಪೂರ್ಣ ಅನಗತ್ಯವಾಗಿದ್ದು, ಇದು ಕಿರುಕುಳಕ್ಕೆ ಸಮನಾಗಿದೆ ಎಂದು ಹೇಳಿದೆ.
ಕ್ಯಾಪ್ಟನ್ ವರುಣ್ ಆನಂದ್ ಅವರು ಏರ್ ಇಂಡಿಯಾದ ಸೇವಾನಿರತ ಪೈಲಟ್ ಆಗಿದ್ದು, ಭಾರತೀಯ ಪೈಲಟ್ ಗಳ ಒಕ್ಕೂಟದ ಸದಸ್ಯರೂ ಆಗಿದ್ದಾರೆ. ಜನವರಿ 15ರಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಬಂದಿದೆ ಎಂದು ಅವರಿಗೆ ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ. ಈ ನೋಟಿಸ್ ಕ್ಯಾಪ್ಟನ್ ವರುಣ್ ಆನಂದ್ ವಿಚಾರಣೆಗೆ ಹಾಜರಾಗಲು ಅಗತ್ಯವಿರುವ ಶಾಸನಾತ್ಮಕ ಆಧಾರ, ಉದ್ದೇಶ ಅಥವಾ ಸಮನ್ಸ್ ನ ಪ್ರಸ್ತುತತೆ ಕುರಿತು ನಿರ್ದಿಷ್ಟವಾಗಿ ಉಲ್ಲೇಖಿಸುವಲ್ಲಿ ವಿಫಲವಾಗಿದೆ ಎಂದು ಭಾರತೀಯ ಪೈಲಟ್ ಗಳ ಒಕ್ಕೂಟ ಒತ್ತಿ ಹೇಳಿದೆ.
“ಕ್ಯಾಪ್ಟನ್ ವರುಣ್ ಆನಂದ್ ಅವರಿಗೆ ಸಮನ್ಸ್ ಜಾರಿಗೊಳಿಸಿರುವುದು, ವಿಶೇಷವಾಗಿ ಈ ಘಟನೆಯಲ್ಲಿ ಅವರು ಯಾವುದೇ ರೀತಿಯಲ್ಲೂ ಭಾಗಿಯಾಗಿರದಿದ್ದರೂ ಜಾರಿಗೊಳಿಸಿರುವುದು ಸಂಪೂರ್ಣ ಅನಗತ್ಯವಾಗಿತ್ತು. ಇದು ಕಿರುಕುಳಕ್ಕೆ ಸಮನಾಗಿದೆ” ಎಂದು ವಿಮಾನ ಅಪಘಾತ ತನಿಖಾ ದಳದ ಅಧಿಕಾರಿಗಳಿಗೆ ರವಾನಿಸಿರುವ ನೋಟಿಸ್ ನಲ್ಲಿ ಭಾರತೀಯ ಪೈಲಟ್ ಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.







