ಅಹಮದಾಬಾದ್ ವಿಮಾನ ದುರಂತ | ತಾಯಿ ಮತ್ತು ಎರಡು ವರ್ಷದ ಮಗಳಿಗಾಗಿ ಹುಡುಕಾಟ ನಡೆಸುತ್ತಿರುವ ರವಿ ಠಾಕೂರ್
►ವಿಮಾನ ಪತನವಾದ ಬಿ ಜೆ ಹಾಸ್ಟೆಲ್ ನಲ್ಲಿ ಬಾಣಸಿಗನಾಗಿರುವ ರವಿ ►ವೈದ್ಯಕೀಯ ವಿದ್ಯಾರ್ಥಿಗಳ ಪಾಲಿಗೆ ʼಲಾಸ್ಟ್ ಲಂಚ್ʼ ಆದ ವಿಮಾನ ದುರಂತ!

ಅಹಮದಾಬಾದ್: ಏರ್ ಇಂಡಿಯಾ ವಿಮಾನವು ಗುರುವಾರ ಗುಜರಾತ್ ನ ಅಹಮದಾಬಾದ್ ನ ಬಿ.ಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಪತನವಾಗಿತ್ತು. ಈ ವೈಮಾನಿಕ ದುರಂತದಲ್ಲಿ ಪ್ರಯಾಣಿಕರು, ಸಿಬ್ಬಂದಿ ಹಾಗೂ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
VIDEO | Ahmedabad air crash: Ravindra Thakore mourns the loss of his mother and daughter, who were working at the canteen of the medical college hostel on which the ill-fated aircraft crashed. He says, “I want the authorities to check inside the building. I want to go by myself.… pic.twitter.com/9b5FRVHJWr
— Press Trust of India (@PTI_News) June 13, 2025
ಬಿ.ಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನ ಕ್ಯಾಂಟೀನ್ ನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದ ರವಿ ಠಾಕೂರ್ ಅವರು ವಿಮಾನ ದುರಂತದ ಬಳಿಕ ತನ್ನ ಎರಡು ವರ್ಷದ ಪುತ್ರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರವಿ ಅವರು ಅದೇ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯ ಜೊತೆ ಪುತ್ರಿಯನ್ನು ಬಿಟ್ಟು, ಅಪಘಾತ ಸಂಭವಿಸುವುದಕ್ಕೂ ಅರ್ಧ ಗಂಟೆ ಮುನ್ನ ಆಸ್ಪತ್ರೆಯಲ್ಲಿನ ಹಿರಿಯ ವೈದ್ಯರಿಗೆ ಊಟದ ಡಬ್ಬಿಗಳನ್ನು ಸರಬರಾಜು ಮಾಡಲು ತೆರಳಿದ್ದರು. ದುರಂತದ ಬಳಿಕ ಕ್ಯಾಂಟೀನ್ ಗೆ ಬಂದು ನೋಡಿದರೆ ಅಲ್ಲಿ ತಾಯಿಯೂ ಇಲ್ಲ. ಪುತ್ರಿಯೂ ಕಾಣಿಸುತ್ತಿಲ್ಲ.
ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಠಾಕೂರ್, "ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಮಾಡುತ್ತಿದ್ದ ಎಲ್ಲ ಮಹಿಳೆಯರೂ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ನನ್ನ ತಾಯಿ ಮತ್ತು ಪುತ್ರಿ ಮಾತ್ರ ಒಳಗೇ ಸಿಲುಕಿಕೊಂಡಿದ್ದಾರೆ. ನಾನು ಅವರಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದರೂ, ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ವಿಚಾರಿಸಿದರು ಅವರ ಸುಳಿವಿಲ್ಲ. ಅವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ. ಅವರನ್ನು ಹುಡುಕಿಕೊಡಿ" ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಅಪಘಾತದಲ್ಲಿ ಕನಿಷ್ಠ ನಾಲ್ಕು ಮಂದಿ ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಐವರು ಸಂಬಂಧಿಕರು ಮೃತಪಟ್ಟಿದ್ದಾರೆ ಎಂದು ಕಿರಿಯ ವೈದ್ಯರ ಒಕ್ಕೂಟದ ಭಾಗವಾಗಿರುವ ಹೆಸರೇಳಲಿಚ್ಛಿಸದ ಸ್ಥಾನಿಕ ವೈದ್ಯರೊಬ್ಬರು Reuters ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ ಅಹಮದಾಬಾದ್ ನ ಹಾಸ್ಟೆಲ್ ನಲ್ಲಿ ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪಾಲಿಗೆ ಅದೇ ಲಾಸ್ಟ್ ಲಂಚ್ ಆಗಲಿದೆ ಎನ್ನುವ ಯಾವ ಊಹೆಯೂ ಇರಲಿಲ್ಲ. ಹಸಿದ ಹೊಟ್ಟೆ ತಣಿಸಿ ತಮ್ಮ ತರಗತಿಗೆ ಮರಳಬೇಕಿದ್ದ ಅವರೆಲ್ಲಾ ಈಗ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅವರನ್ನೆಲ್ಲ ತನ್ನ ರೆಕ್ಕೆಗಯಲ್ಲಿ ಬಚ್ಚಿಟ್ಟುಕೊಂಡು ಕರೆದುಕೊಂಡು ಹೋಗಿದೆ. ಗುರುತು ಹಿಡಿಯಲಾರದ ಮಟ್ಟಿಗೆ ಅವರೆಲ್ಲ ಮೃತ ದೇಹಗಳಾಗಿ ಬಿದ್ದಿದ್ದಾರೆ.
ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಹಾಸ್ಟೆಲ್ ಮೇಲೆ ಏರ್ ಇಂಡಿಯಾ ವಿಮಾನವು ಪತನಗೊಂಡಿತು. ವಿದ್ಯಾರ್ಥಿ ನಿಲಯದ ಕ್ಯಾಂಟೀನ್ ನೊಳಗೆ ವಿಮಾನದ ಭಾಗಗಳು ನುಗ್ಗಿದ್ದರಿಂದ, ಆಗಷ್ಟೇ ಊಟದ ವಿರಾಮಕ್ಕೆ ಹಾಜರಾಗಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಪಾಲಿಗೆ ಈ ಅಪಘಾತ ಮರಣ ಶಾಸನವಾಗಿ ಪರಿಣಮಿಸಿತು ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುರುವಾರ ನಡೆದ ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದ ಅಪಘಾತದಲ್ಲಿ ಕೇವಲ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದು, ಕಳೆದ ಒಂದು ದಶಕದಲ್ಲಿ ನಡೆದಿರುವ ಅತ್ಯಂತ ಕೆಟ್ಟ ಜಾಗತಿಕ ವೈಮಾನಿಕ ದುರಂತವಿದು ಎಂದು ಬಣ್ಣಿಸಲಾಗಿದೆ. ವಿಮಾನವು ಜನನಿಬಿಡ ಪ್ರದೇಶದಲ್ಲಿ ಪತನವಾಗಿದ್ದರಿಂದ ಸುಮಾರು 24 ಮಂದಿ ಕೂಡಾ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.







