ಜೂ.17ರ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಎಡಿಎಂಕೆ

Image Source : AIADMK (X)
ಚೆನ್ನೈ: ತಮಿಳುನಾಡಿನ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಜೂ.17ರಂದು ರಾಜ್ಯದಿಂದ ರಾಜ್ಯಸಭೆಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ತನ್ನ ಇಬ್ಬರು ಅಭ್ಯರ್ಥಿಗಳನ್ನು ರವಿವಾರ ಪ್ರಕಟಿಸಿದೆ.
ಪಕ್ಷದ ವಕೀಲರ ವಿಭಾಗದ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಐ.ಎಸ್.ಇಂಬದುರೈ ಮತ್ತು ಪಕ್ಷದ ಚೆಂಗಲ್ಪೇಟ್-ಪೂರ್ವ ಜಿಲ್ಲಾ ಪ್ರೆಸಿಡಿಯಂ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಧನಪಾಲ್ ಅವರ ಹೆಸರುಗಳನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಪ್ರಕಟಿಸಿದರು.
2025, ಜು.24ರಂದು ಪಿಎಂಕೆಯ ಅನ್ಬುಮಣಿ ರಾಮದಾಸ್ ಮತ್ತು ಎಂಡಿಎಂಕೆ ನಾಯಕ ವೈಕೊ ಸೇರಿದಂತೆ ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದಾರೆ.
ಖಾಲಿಯಾಗಲಿರುವ ಆರು ಸ್ಥಾನಗಳ ಪೈಕಿ ನಾಲ್ಕನ್ನು ಆಡಳಿತಾರೂಢ ಡಿಎಂಕೆ ರಾಜ್ಯ ವಿಧಾನಸಭೆಯಲ್ಲಿ ತನ್ನ ಮತ್ತು ಮಿತ್ರಪಕ್ಷಗಳ ಬಲದ ಆಧಾರದಲ್ಲಿ ಸುಲಭವಾಗಿ ಗೆಲ್ಲಲಿದೆ. ಎಐಎಡಿಎಂಕೆ ಮಿತ್ರಪಕ್ಷಗಳ ಬೆಂಬಲದೊಂದಿಗೆ ಎರಡು ಸ್ಥಾನಗಳನ್ನು ಪಡೆಯಬಹುದು.
ಡಿಎಂಕೆ ಈಗಾಗಲೇ ಮೂವರು ಅಭ್ಯರ್ಥಿಗಳನ್ನು ಘೋಷಿಸಿದ್ದು,ಒಂದು ಸ್ಥಾನವನ್ನು ಮಿತ್ರಪಕ್ಷ ಮಕ್ಕಳ್ ನೀಧಿ ಮೈಯಂಗೆ ಬಿಟ್ಟು ಕೊಟ್ಟಿದ್ದು,ಅದು ತನ್ನ ಅಭ್ಯರ್ಥಿಯಾಗಿ ಪಕ್ಷದ ಸ್ಥಾಪಕ ಕಮಲ ಹಾಸನ್ ಅವರನ್ನು ಹೆಸರಿಸಿದೆ.





