ಬಿಹಾರದಲ್ಲಿ 'ಜಾತ್ಯತೀತ ಮತಗಳ ವಿಭಜನೆ ತಪ್ಪಿಸಲು' ಲಾಲು ಮೈತ್ರಿ ಕೋರಿದ ಎಐಎಂಐಎಂ; ಆರ್ಜೆಡಿ ನಕಾರ

Photo : PTI
ಪಾಟ್ನಾ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಬಿಹಾರದಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆಯ ವಿವಾದದ ನಡುವೆಯೇ ಮಹಾಘಟಬಂಧನ ಮೈತ್ರಿಕೂಟದಲ್ಲಿ ತನ್ನನ್ನು ಸೇರಿಸಿಕೊಳ್ಳುವಂತೆ ಕೋರಿ ಎಐಎಂಐಎಂ ಆರ್ಜೆಡಿಗೆ ಔಪಚಾರಿಕವಾಗಿ ಪತ್ರವನ್ನು ಬರೆದಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ,ವಿಶೇಷವಾಗಿ ಸೀಮಾಂಚಲ್ನಂತಹ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಮತದಾನ ಹಕ್ಕನ್ನು ಕಿತ್ತುಕೊಳ್ಳಲಿದೆ ಎಂದು ಆರ್ಜೆಡಿ ನೇತೃತ್ವದ ಪ್ರತಿಪಕ್ಷವು ಆರೋಪಿಸಿದ್ದು, ಈ ಪ್ರದೇಶಗಳು ರಾಜ್ಯದಲ್ಲಿ ಎಐಎಐಎಂ ನೆಲೆಯಾಗಿದೆ.
‘2015ರಿಂದಲೂ ಎಐಎಂಐಎಂ ರಾಜ್ಯ ರಾಜಕೀಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದೆ. ಚುನಾವಣೆಗಳ ಸಂದರ್ಭದಲ್ಲಿ ಜಾತ್ಯತೀತ ಮತಗಳ ವಿಭಜನೆಯನ್ನು ತಡೆಯುವುದು ಮೊದಲ ದಿನದಿಂದಲೂ ನಮ್ಮ ಪ್ರಯತ್ನವಾಗಿದೆ. ಜಾತ್ಯತೀತ ಮತಗಳ ವಿಭಜನೆಯು ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರಲು ಅವಕಾಶವನ್ನು ಕಲ್ಪಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹಿಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಸಂದರ್ಭಲ್ಲಿ ಮಹಾಘಟಬಂಧನ ಸೇರುವ ನಮ್ಮ ಬಯಕೆಯನ್ನು ನಾವು ವ್ಯಕ್ತಪಡಿಸಿದ್ದೆವು,ಆದರೆ ನಮ್ಮ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಈಗ 2025ರ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಐಎಂಐಎಂ ಅನ್ನು ಮಹಾಘಟಬಂಧನದಲ್ಲಿ ಸೇರಿಸಿಕೊಳ್ಳಬೇಕೆಂದು ನಾವು ಮತ್ತೊಮ್ಮೆ ಕೋರಿಕೊಳ್ಳುತ್ತಿದ್ದೇವೆ’ ಎಂದು ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಹಾಗೂ ಶಾಸಕ ಅಖ್ತರುಲ್ ಇಮಾನ್ ಅವರು ಜು.2ರಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಬರೆದರುವ ಪತ್ರದಲ್ಲಿ ಹೇಳಿದ್ದಾರೆ. ತಾನು ಈ ವಿಷಯವನ್ನು ಈಗಾಗಲೆ ವೈಯಕ್ತಿವಾಗಿ ಮತ್ತು ದೂರವಾಣಿ ಮೂಲಕ ಮಹಾಘಟಬಂಧನ್ನ ಹಲವಾರು ಹಿರಿಯ ನಾಯಕರಿಗೆ ತಿಳಿಸಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಆದರೆ ಆರ್ಜೆಡಿ ತಾನು ಮೈತ್ರಿಗೆ ಮುಕ್ತವಾಗಿಲ್ಲ ಎಂದು ಸುಳಿವು ನೀಡಿದೆ.
ಎಐಎಂಐಎಮ್ನ ಜಾತ್ಯತೀತ ಪುರಾವೆಗಳನ್ನು ಪ್ರಶ್ನಿಸಿರುವ ಆರ್ಜೆಡಿ ವಕ್ತಾರ ಮೃತ್ಯುಂಜಯ ತಿವಾರಿಯವರು, ಎಐಎಂಐಎಮ್ನ ರಾಜಕೀಯ ಚರಿತ್ರೆಯು ಅದು ತನ್ನ ಕ್ರಮಗಳಿಂದ ಅನುದ್ದಿಷ್ಟವಾಗಿ ಬಿಜೆಪಿಗೆ ಲಾಭವನ್ನು ಮಾಡಿಕೊಟ್ಟಿದೆ ಎನ್ನುವುದನ್ನು ತೋರಿಸುತ್ತದೆ. ಅದು ತಾವಾಗಲೂ ಬಿಜೆಪಿಯ ‘ಬಿ’ತಂಡವಾಗಿ ಕೆಲಸ ಮಾಡಿದೆ. ಆದಾಗ್ಯೂ ಮತದಾರರು ಈ ಬಾರಿ ಹೆಚ್ಚು ಜಾಗೃತರಾಗಿದ್ದಾರೆ ಮತ್ತು ಅದರ ಪ್ರಭಾವಕ್ಕೆ ಒಳಗಾಗುವುದಿಲ್ಲ. ಜಾತ್ಯತೀತ ಮತಗಳು ಎಲ್ಲಿಯೂ ಹೋಗುವುದಿಲ್ಲ. ಬಿಹಾರದ ಜನರು ತೇಜಸ್ವಿ ಯಾದವರನ್ನು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿಸಲು ದೃಢಸಂಕಲ್ಪ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು. ಆದಾಗ್ಯೂ ಅಂತಿಮ ನಿರ್ಧಾರವು ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ಅವರ ಕೈಯಲ್ಲಿದೆ ಎಂದೂ ಅವರು ಇದೇ ವೇಳೆ ಹೇಳಿದರು.