ವೆಂಟಿಲೇಟರ್ನಲ್ಲಿದ್ದ ಗಗನಸಖಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ: ಆರೋಪ

PC : NDTV
ಹೊಸದಿಲ್ಲಿ: ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿಯೊಬ್ಬರ ಮೇಲೆ ಆಸ್ಪತ್ರೆಯ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ವರದಿಯಾಗಿದೆ.
46 ವರ್ಷದ ಗಗನಸಖಿ, ವೆಂಟಿಲೇಟರ್ನಲ್ಲಿ ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಯ ಸಿಬ್ಬಂದಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ವಿಮಾನಯಾನ ತರಬೇತಿಗಾಗಿ ಗುರುಗ್ರಾಮಕ್ಕೆ ಬಂದಿದ್ದ ಸಂತ್ರಸ್ತೆ, ತಾನು ತಂಗಿದ್ದ ಹೋಟೆಲ್ ಈಜುಕೊಳದಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದರು. ತುರ್ತು ಚಿಕಿತ್ಸೆಗಾಗಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ, ಏಪ್ರಿಲ್ 6 ರಂದು, ಆಕೆಯ ಆರೋಗ್ಯ ಹದಗೆಟ್ಟ ಕಾರಣ ಆಕೆಯ ಪತಿ ಸದರ್ ಪ್ರದೇಶದ ಮತ್ತೊಂದು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿದ್ದು, ಅಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ತಾನು ಪ್ರಜ್ಞಾಹೀನಳಾಗಿದ್ದಾಗ, ಆಸ್ಪತ್ರೆ ಸಿಬ್ಬಂದಿಯಿಂದ ಅನುಚಿತ ದೈಹಿಕ ಸಂಪರ್ಕವನ್ನು ಅನುಭವಿಸಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಸ್ಥಿತಿ ಗಂಭೀರವಾಗಿರುವುದರಿಂದ ಚಲಿಸಲು, ಕಿರುಚಲು ಅಥವಾ ವಿರೋಧಿಸಲು ಸಾಧ್ಯವಾಗಲಿಲ್ಲ ಎಂದೂ ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಘಟನೆ ಸಂದರ್ಭದಲ್ಲಿ ಇಬ್ಬರು ನರ್ಸ್ಗಳು ತನ್ನ ಸುತ್ತಲೂ ಇದ್ದರು, ಆದರೆ ಅವರು ಮಧ್ಯಪ್ರವೇಶಿಸಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಏಪ್ರಿಲ್ 13 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಮನೆಗೆ ಹಿಂದಿರುಗಿದ ನಂತರ, ಆಕೆ ಘಟನೆ ಬಗ್ಗೆ ತಮ್ಮ ಪತಿಗೆ ಮಾಹಿತಿ ನೀಡಿ, ಸಹಾಯವಾಣಿ ಸಂಖ್ಯೆ 112 ಅನ್ನು ಸಂಪರ್ಕಿಸಿದ್ದಾರೆ. ಬಳಿಕ ದಂಪತಿಗಳು ತಮ್ಮ ಕಾನೂನು ಸಲಹೆಗಾರರ ಸಹಾಯದಿಂದ ಸದರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದರು ಎಂದು ವರದಿಯಾಗಿದೆ.
ದೂರಿನ ನಂತರ, ಗುರುಗ್ರಾಮ್ ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ, ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಲಾಗುತ್ತಿದ್ದು, ಆಸ್ಪತ್ರೆ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ತನಿಖೆಗೆ ಸಹಕರಿಸುತ್ತಿರುವುದಾಗಿ ಆಸ್ಪತ್ರೆ ಹೇಳಿಕೊಂಡಿದ್ದು, "ಈ ಹಂತದಲ್ಲಿ, ಯಾವುದೇ ಆರೋಪಗಳು ದೃಢಪಟ್ಟಿಲ್ಲ, ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಎಲ್ಲಾ ಸಂಬಂಧಿತ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ" ಎಂದು ತಿಳಿಸಿದೆ.