ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ : ದಿಲ್ಲಿಯಿಂದ ಟೆಲ್ ಅವೀವ್ ಗೆ ತೆರಳುತ್ತಿದ್ದ ವಿಮಾನದ ಮಾರ್ಗ ಅಬು ಧಾಬಿಗೆ ಬದಲಾವಣೆ
ಮೇ 6ರವರೆಗೆ ಟೆಲ್ ಅವೀವ್ಗೆ ವಿಮಾನ ಹಾರಾಟ ಅಮಾನತುಗೊಳಿಸಿದ ಏರ್ ಇಂಡಿಯಾ

ಸಾಂದರ್ಭಿಕ ಚಿತ್ರ | PC : PTI
ಹೊಸ ದಿಲ್ಲಿ: ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನ ವಿಮಾನ ನಿಲ್ದಾಣದ ಬಳಿ ರವಿವಾರ ಕ್ಷಿಪಣಿ ದಾಳಿ ನಡೆದಿದ್ದರಿಂದ, ಟೆಲ್ ಅವೀವ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಮಾರ್ಗವನ್ನು ಅಬುಧಾಬಿಗೆ ಬದಲಾಯಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರ ಬೆನ್ನಿಗೇ ದಿಲ್ಲಿಯಿಂದ ಟೆಲ್ ಅವೀವ್ ಗೆ ಹಾಗೂ ಟೆಲ್ ಅವೀವ್ ನಿಂದ ದಿಲ್ಲಿಗೆ ಸಂಚರಿಸುವ ಎಲ್ಲ ಏರ್ ಇಂಡಿಯಾ ವಿಮಾನಗಳ ಸೇವೆಯನ್ನು ಮೇ 6ರವರೆಗೆ ಅಮಾನತುಗೊಳಿಸಲಾಗಿದೆ.
ಟೆಲ್ ಅವೀವ್ ಗೆ ಆಗಮಿಸಬೇಕಿದ್ದ ಏರ್ ಇಂಡಿಯಾ ವಿಮಾನದ ಮಾರ್ಗವನ್ನು ಬದಲಿಸಲಾಗಿದೆ ಎಂದು ಟೆಲ್ ಅವೀವ್ ನ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರೂ ದೃಢಪಡಿಸಿದ್ದಾರೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಏರ್ ಇಂಡಿಯಾ ವಿಮಾನವು ಟೆಲ್ ಅವೀವ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವುದಕ್ಕಿಂತ ಒಂದು ಗಂಟೆ ಮುಂಚೆ ಈ ಕ್ಷಿಪಣಿ ದಾಳಿ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬೋಯಿಂಗ್ 787 ವಿಮಾನದೊಂದಿಗೆ ಕಾರ್ಯಾಚರಿಸುತ್ತಿರುವ ಏರ್ ಇಂಡಿಯಾ ವಿಮಾನ ಸಂಖ್ಯೆ ಎಐ139 ದಿಲ್ಲಿಗೆ ಮರಳುತ್ತಿದೆ ಎಂದೂ ಮೂಲಗಳು ತಿಳಿಸಿವೆ.
ವಿಮಾನ ಪತ್ತೆ ಅಂತರ್ಜಾಲ ತಾಣವಾದ Flightradar24.comನಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ವಿಮಾನ ನಿಲ್ದಾಣ ಪ್ರಾಧಿಕಾರಗಳು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಈ ವಿಮಾನದ ಮಾರ್ಗವನ್ನು ಅಬು ಧಾಬಿಗೆ ಬದಲಾಯಿಸಲು ತೀರ್ಮಾನಿಸಿದಾಗ, ಈ ವಿಮಾನವು ಜೋರ್ಡಾನ್ ವಾಯುಮಾರ್ಗದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಹೇಳಲಾಗಿದೆ.
ಈ ನಡುವೆ, ರವಿವಾರ ಟೆಲ್ ಅವೀವ್ ನಿಂದ ದಿಲ್ಲಿಗೆ ಆಗಮಿಸಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ.
ಯೆಮೆನ್ ಉಡಾಯಿಸಿದ ಕ್ಷಿಪಣಿಯು ಟೆಲ್ ಅವೀವ್ ವಿಮಾನ ನಿಲ್ದಾಣದ ಬಳಿ ಸ್ಫೋಟಗೊಂಡ ನಂತರ, ಟೆಲ್ ಅವೀವ್ ವಿಮಾನ ನಿಲ್ದಾಣದ ಎಲ್ಲ ವೈಮಾನಿಕ ಸಂಚಾರವನ್ನು ಅಮಾನತುಗೊಳಿಸಲಾಗಿದೆ.







