ಭೀಕರ ದುರಂತದ ಬಳಿಕ ವಿಮಾನಯಾನ ಸಂಖ್ಯೆ ‘171’ ಕೈಬಿಡಲು ಏರ್ ಇಂಡಿಯಾ ನಿರ್ಧಾರ

PC : airwaysmag.com
ಹೊಸದಿಲ್ಲಿ: ಗುರುವಾರ ಅಹ್ಮದಾಬಾದ್ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ ಬಳಿಕ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಯಾನ ಸಂಖ್ಯೆ ‘171’ನ್ನು ಕೈಬಿಡಲು ನಿರ್ಧರಿಸಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಗುರುವಾರ ಪತನಗೊಂಡ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಅಹ್ಮದಾಬಾದ್ ಮತ್ತು ಲಂಡನ್ನ ಗ್ಯಾಟ್ವಿಕ್ ನಡುವೆ ಯಾನ ಸಂಖ್ಯೆ ‘ಎಐ 171’ ಅನ್ನು ಕಾರ್ಯಾಚರಿಸುತ್ತಿತ್ತು.
ಮಾರಣಾಂತಿಕ ವಿಮಾನ ಅಪಘಾತಗಳು ಸಂಭವಿಸಿದಾಗ ವಾಯಯಾನ ಸಂಸ್ಥೆಗಳು ನಿರ್ದಿಷ್ಟ ಯಾನ ಸಂಖ್ಯೆಯ ಬಳಕೆಯನ್ನು ನಿಲ್ಲಿಸುವುದು ಸಾಮಾನ್ಯ ಎಂದು ಮೂಲಗಳು ಶನಿವಾರ ತಿಳಿಸಿದವು.
ಜೂ.17ರಿಂದ ಅಹ್ಮದಾಬಾದ್-ಲಂಡನ್ ಗ್ಯಾಟ್ವಿಕ್ ಯಾನ ಸಂಖ್ಯೆಯು ‘ಎಐ 171’ರ ಬದಲು ‘ಎಐ 159’ ಆಗಲಿದೆ. ಇದಕ್ಕಾಗಿ ಬುಕಿಂಗ್ ಸಿಸ್ಟಮ್ನಲ್ಲಿ ಅಗತ್ಯ ಬದಲಾವಣೆಗಳನ್ನು ಶುಕ್ರವಾರ ಮಾಡಲಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಕೂಡ ತನ್ನ ಯಾನ ಸಂಖ್ಯೆ‘ಐಎಕ್ಸ್ 171’ನ್ನು ಕೈಬಿಡಲು ನಿರ್ಧರಿಸಿದೆ.
ಯಾನ ಸಂಖ್ಯೆ ‘171’ ಅನ್ನು ಮುಂದುವರಿಸದಿರುವುದು ಅಗಲಿದ ಆತ್ಮಗಳಿಗೆ ಗೌರವದ ಸಂಕೇತವಾಗಿದೆ ಎಂದೂ ಮೂಲಗಳು ತಿಳಿಸಿದವು.
2020ರಲ್ಲಿ ಕೋಝಿಕೋಡ್ನಲ್ಲಿ ತನ್ನ ವಿಮಾನವು ಅಪಘಾತಕ್ಕೀಡಾದ ಬಳಿಕ ಆ ಯಾನ ಸಂಖ್ಯೆಯ ಬಳಕೆಯನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ನಿಲ್ಲಿಸಿತ್ತು. ಅಪಘಾತದಲ್ಲಿ ಇಬ್ಬರು ಪೈಲಟ್ಗಳು ಸೇರಿದಂತೆ 21 ಜನರು ಸಾವನ್ನಪ್ಪಿದ್ದರು.







