ಎಲ್ಲಾ ಬೋಯಿಂಗ್ ವಿಮಾನಗಳ ಇಂಧನ ಸ್ವಿಚ್ ತಪಾಸಣೆ ಪೂರ್ಣಗೊಳಿಸಿದ ಏರ್ ಇಂಡಿಯಾ
ಯಾವುದೇ ಸಮಸ್ಯೆ ಕಂಡುಬಂದಿಲ್ಲವೆಂದ ವಿಮಾನಯಾನ ಸಂಸ್ಥೆ

ಏರ್ ಇಂಡಿಯಾ | PC : PTI
ನಾಗಪುರ: ತಾನು ನಿರ್ವಹಿಸುತ್ತಿರುವ ಎಲ್ಲಾ ಬೋಯಿಂಗ್ 787 ಹಾಗೂ 737 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ (ಎಫ್ಸಿಎಸ್)ಗಳ ಲಾಕಿಂಗ್ ತಂತ್ರಜ್ಞಾನದ ‘ಮುಂಜಾಗರೂಕತಾ’ ತಪಾಸಣೆಯನ್ನು ಪೂರ್ಣಗೊಳಿಸಿದ್ದು, ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲವೆಂದು ಏರ್ ಇಂಡಿಯಾ ಮಂಗಳವಾರ ತಿಳಿಸಿದೆ.
ಇಂಧನ ನಿಯಂತ್ರಣ ಸ್ವಿಚ್ಗಳು, ವಿಮಾನದ ಇಂಜಿನ್ಗಳಿಗೆ ಇಂಧನದ ಹರಿವನ್ನು ನಿಯಂತ್ರಿಸುತ್ತವೆ.
ಗುಜರಾತ್ನ ಅಹ್ಮದಾಬಾದ್ನಲ್ಲಿ ಕಳೆದ ತಿಂಗಳು ಏರ್ ಇಂಡಿಯಾ ವಿಮಾನವು ಪತನಗೊಳ್ಳುವ ಮುನ್ನ ಅದರ ಇಂಧನ ನಿಯಂತ್ರಣ ಸ್ವಿಚ್ಗಳು ನಿಷ್ಕ್ರಿಯವಾಗಿದ್ದವೆಂಬುದು ವೈಮಾನಿಕ ಆವಘಡ ತನಿಖಾ ಬ್ಯೂರೋ (ಎಎಐಬಿ) ತನ್ನ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿತ್ತು. ಆ ಬಳಿಕ ವೈಮಾನಿಕ ಸುರಕ್ಷತಾ ನಿಯಂತ್ರಕ ಸಂಸ್ಥೆಯಾದ ಡಿಜಿಸಿಎ, ಎಲ್ಲಾ ವಿಮಾನಯಾನ ಸಂಸ್ಥೆಗಳು ಅವುಗಳ ಬೋಯಿಂಗ್ 787 ಹಾಗೂ 737ಮಾದರಿಯ ವಿಮಾನಗಳನ್ನು ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಬೇಕೆಂದು ಆದೇಶಿಸಿತ್ತು.
ಜೂನ್ 12ರಂದು ಅಹ್ಮದಾಬಾದ್ನಿಂದ ಲಂಡನ್ನ ಗಾಟ್ವಿಕಂಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಮಾದರಿಯ ಎಐ 171 ವಿಮಾನವು, ಟೇಕ್ಆಫ್ ಆದ ಕೂಡಲೇ ಪತನಗೊಂಡು, 241 ಪ್ರಯಾಣಿಕರು ಹಾಗೂ ಪತನಗೊಂಡ ಸ್ಥಳದಲ್ಲಿದ್ದ 19 ಮಂದಿ ಸಾವನ್ನಪ್ಪಿದ್ದರು.





