ಸುರಕ್ಷತಾ ಪ್ರಮಾಣ ಪತ್ರವಿಲ್ಲದೆ ಪದೇ ಪದೇ ಹಾರಾಟ: Air India ವಿರುದ್ಧ ತನಿಖೆ ನಡೆಸಲಿರುವ DGCA

ಏರ್ ಇಂಡಿಯಾ ವಿಮಾನ |Photo Credit; PTI
ಹೊಸದಿಲ್ಲಿ: ಸುರಕ್ಷತಾ ಮಾನದಂಡಗಳ ದಾಖಲೆಯಾದ ಮಾನ್ಯತೆ ಹೊಂದಿದ ವಾಯುಮೌಲ್ಯ ಪರಾಮರ್ಶೆ ಪ್ರಮಾಣ ಪತ್ರವಿಲ್ಲದೆ ಎಂಟು ಬಾರಿ ತನ್ನ ಎ-320 ಏರ್ ಬಸ್ ವಿಮಾನದ ಹಾರಾಟ ನಡೆಸಿರುವ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ತನಿಖೆ ನಡೆಸಲಾಗುವುದು ಎಂದು ನಾಗರಿಕ ವಿಮಾನ ಯಾನ ನಿಯಂತ್ರಣ ಪ್ರಾಧಿಕಾರವಾದ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ (DGCA) ಮಂಗಳವಾರ ಪ್ರಕಟಿಸಿದೆ.
ಈ ವಿಮಾನವನ್ನು ಹಾರಾಟ ನಡೆಸದಂತೆ ಸೂಚಿಸಲಾಗಿದೆ ಹಾಗೂ ಸಂಬಂಧಿತ ಸಿಬ್ಬಂದಿಯನ್ನು ಸೇವಾ ಪಾಳಿಯಿಂದ ಹೊರಗಿಡಲಾಗಿದೆ ಎಂದೂ ಅದು ಹೇಳಿದೆ. ಆದರೆ, ಆ ವಿಮಾನ ಯಾವ ಮಾದರಿಯದ್ದು ಹಾಗೂ ಅದರ ತಯಾರಕರು ಯಾರು ಎಂಬುದರ ಕುರಿತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ನಿರ್ದಿಷ್ಟವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಆ ವಿಮಾನವು ಸಿಂಗಲ್ ಇಂಜಿನ್ ಏರ್ಬಸ್ ವಿಮಾನ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಇತ್ತೀಚಿನ ಸುರಕ್ಷತಾ ಲೋಪವಾಗಿದೆ. ಈ ಹಿಂದೆ ಕೂಡಾ ಸಿಬ್ಬಂದಿಗಳ ಆಲಸ್ಯಕಾರಿ ನಿರ್ವಹಣೆ ಮತ್ತು ತರಬೇತಿ ಸೇರಿದಂತೆ ವಿವಿಧ ಲೋಪಗಳಿಗಾಗಿ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಎಚ್ಚರಿಕೆ ನೀಡಿತ್ತು.





