ಮುಂಗಡ ಕಾದಿರಿಸಿದ್ದ ಊಟ ಕೇಳಿದ್ದಕ್ಕೆ ಏರ್ ಇಂಡಿಯಾ ಸಿಬ್ಬಂದಿಯಿಂದ ಕಿರುಕುಳ: ಪ್ರಯಾಣಿಕನಿಂದ ಆರೋಪ

Photo Credit : Abhishek Chaudhry \ instagram.com
ಹೊಸದಿಲ್ಲಿ,ಜ.22:ಮುಂಗಡವಾಗಿ ಕಾದಿರಿಸಿದ್ದ ಊಟವನ್ನು ನೀಡುವಂತೆ ಕೇಳಿದ್ದಕ್ಕಾಗಿ ಏರ್ ಇಂಡಿಯಾದ ಬ್ಯಾಂಕಾಕ್-ದಿಲ್ಲಿ ವಿಮಾನದ ಪ್ರಯಾಣಿಕನನ್ನು ಹೊಸದಿಲ್ಲಿಯ ವಿಮಾನನಿಲ್ದಾಣದಲ್ಲಿ ಕೂಡಿಹಾಕಿ, ಕಿರುಕುಳ ನೀಡಿದ ಘಟನೆ ಗುರುವಾರ ವರದಿಯಾಗಿದೆ. ಏರ್ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕನಿಗೆ ಬೆದರಿಕೆ ಹಾಕಿದ್ದಲ್ಲದೆ, ಆತನ ಮೊಬೈಲ್ ಫೋನ್ ಕೂಡಾ ವಶಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ವಿಮಾನದ ಪೈಲಟ್ ಪ್ರಯಾಣಿಕನ ವಿರುದ್ಧ ನೀತಿಸಂಹಿತೆ ಕುರಿತ ಎಚ್ಚರಿಕೆಯ ಪತ್ರವನ್ನು ಕೂಡಾ ಜಾರಿ ಮಾಡಿದ್ದಾಗಿ ವರದಿ ತಿಳಿಸಿದೆ.
ರುಚಿ ಕೊಕ್ಚಾ ಎಂಬವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಸಾರ ಮಾಡಿ ವೀಡಿಯೊದಲ್ಲಿ ಸಂತ್ರಸ್ತ ಪ್ರಯಾಣಿಕನು, ತಾನು ಹಾಗೂ ತನ್ನ ಸಹಪ್ರಯಾಣಿಕ ಅನುಭವಿಸಿದ ಕಿರುಕುಳವನ್ನು ವಿವರಿಸಿದ್ದಾರೆ.
ಸಂತ್ರಸ್ತ ಪ್ರಯಾಣಿಕ ಅಭಿಷೇಕ್ ಚೌಧುರಿ ಜನವರಿ 19ರಂದು ಬ್ಯಾಂಕಾಕ್ನಿಂದ ದಿಲ್ಲಿಗೆ ಪ್ರಯಾಣಿಸಿದ್ದರು. ಅವರು ಮಾಂಸಹಾರಿ ಊಟವನ್ನು ಕಾದಿರಿಸಿದ್ದರು. ಆದರೆ ಊಟದ ಟ್ರಾಲಿಯು ಅವರು ಆಸೀನರಾಗಿದ್ದ ವಿಮಾನದ ಕೊನೆಯ ಸಾಲಿಗೆ ಬಂದಾಗ ಮಾಂಸಹಾರ ಖಾಲಿಯಾಗಿತ್ತು. ಈ ಬಗ್ಗೆ ಅಭಿಷೇಕ್ ಚೌಧುರಿ ಹಾಗೂ ಜೊತೆಗಿದ್ದ ಸಹಪ್ರಯಾಣಿಕ ಪ್ರಶ್ನಿಸಿದಾಗ, ಸಿಬ್ಬಂದಿ ಒರಟಾಗಿ ನಿಂದಿಸಿದರು. ತಾನು ಈ ಬಗ್ಗೆ ದೂರು ನೀಡುವುದಾಗಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಾಗಿ ಅಭಿಷೇಕ್ ತಿಳಿಸಿದಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.
ವಿಮಾನನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅಭಿಷೇಕ್ ಅವರನ್ನು ವಿಮಾನನಿಲ್ದಾಣದಲ್ಲಿ ಸಿಬ್ಬಂದಿ ವಶದಲ್ಲಿರಿಸಿಕೊಂಡಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಪೋಸ್ಟ್ ಮಾಡುವುದಿಲ್ಲವೆಂದು ಲಿಖಿತವಾಗಿ ಬರೆದುಕೊಡುಂತೆ ಅವರಿಗೆ ಒತ್ತಡ ಹೇರಲಾಗಿತ್ತು ಮತ್ತು ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ರುಚಿ ಕೊಕ್ಚಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಘಟನೆ ನಡೆದ ಕೆಲವೇ ತಾಸುಗಳಲ್ಲಿ ವೀಡಿಯೊ ಲಕ್ಷಾಂತರ ಮಂದಿಯ ವೀಕ್ಷಣೆಯನ್ನು ಪಡೆಯಿತು ಹಾಗೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ‘‘ಏರ್ ಇಂಡಿಯಾದ ಈ ವರ್ತನೆ ಅಸ್ವೀಕಾರಾರ್ಹವಾಗಿದೆ. ಇದು ಅಧಿಕಾರದ ದುರುಪಯೋಗ ಹಾಗೂ ಪ್ರಯಾಣಿಕರ ಹಕ್ಕುಗಳ ಸನದಿನ ಉಲ್ಲಂಘನೆಯಾಗಿದೆ’’ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







