ಏರ್ ಇಂಡಿಯಾ ವಿಮಾನ ದುರಂತದ ಕುರಿತ ವರದಿ ಊಹಾತ್ಮಕವಾದದ್ದು: ಅಮೆರಿಕದ ಎನ್ಟಿಎಸ್ಬಿ

PC : PTI
ಹೊಸ ದಿಲ್ಲಿ: ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ದಳ ನಡೆಸುತ್ತಿರುವ ತನಿಖೆಗೆ ಬೆಂಬಲ ನೀಡುವುದನ್ನು ಮುಂದುವರಿಸಲಿದ್ದೇವೆ ಹಾಗೂ ಈ ಘಟನೆಯ ಕುರಿತ ವರದಿಗಳು ತೀರಾ ಅವಸರ ಮತ್ತು ಊಹಾತ್ಮಕವಾಗಿವೆ ಎಂದು ಯುಎಸ್ ನ್ಯಾಷನಲ್ ಟ್ರಾನ್ಸ್ಪೋರ್ಟೇಷನ್ ಸೇಫ್ಟಿ ಬೋರ್ಡ್ ಅಧ್ಯಕ್ಷೆ ಜೆನ್ನಿಫರ್ ಹೊಮೆಂಡಿ ತಿಳಿಸಿದ್ದಾರೆ.
ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ಗೆ ತೆರಳಲು ಟೇಕಾಫ್ ಆಗಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನವು ಕೆಲವೇ ಕ್ಷಣಗಳಲ್ಲಿ ಕಟ್ಟಡವೊಂದರ ಮೇಲೆ ಪತನಗೊಂಡ ಪರಿಣಾಮ ಒಟ್ಟು 260 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ ಕೇವಲ ಓರ್ವ ಪ್ರಯಾಣಿಕ ಮಾತ್ರ ಪವಾಡ ಸದೃಶವಾಗಿ ಬದುಕುಳಿದಿದ್ದರು.
ಈ ದುರ್ಘಟನೆಯ ಕುರಿತು ಜುಲೈ 12ರಂದು ವಿಮಾನ ಅಪಘಾತ ತನಿಖಾ ದಳ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿತ್ತು.
ಈ ಕುರಿತು ಎಕ್ಸ್ ನಲ್ಲಿ ಪ್ರಕಟನೆ ಬಿಡುಗಡೆ ಮಾಡಿರುವ ಜೆನ್ನಿಫರ್ ಹೊಮೆಂಡಿ, “ಏರ್ ಇಂಡಿಯಾ ವಿಮಾನ ಸಂಖ್ಯೆ 171 ಅಪಘಾತದ ಕುರಿತ ಮಾಧ್ಯಮ ವರದಿಗಳು ತೀರಾ ಅವಸರ ಹಾಗೂ ಊಹಾತ್ಮಕವಾದುದಾಗಿವೆ. ಭಾರತದ ವಿಮಾನ ಅಪಘಾತ ತನಿಖಾ ದಳವು ಈಗಷ್ಟೇ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ಪ್ರಮಾಣದ ಅಪಘಾತದ ಕುರಿತ ತನಿಖೆ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 12ರಂದು ಅಹ್ಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತ ತನಿಖೆ ಈಗಲೂ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಅಪಘಾತದ ಕುರಿತು ಯಾವುದೇ ಖಚಿತ ನಿರ್ಧಾರಗಳಿಗೆ ಬರುವುದು ತುಂಬಾ ಅವಸರದ್ದಾಗಲಿದೆ. ಹೀಗಾಗಿ ಪ್ರತಿಯೊಬ್ಬರೂ ಅವಸರದ ನಿರೂಪಣೆಗಳನ್ನು ಹರಡುವುದರಿಂದ ದೂರ ಉಳಿಯಬೇಕು ಎಂದು ವಿಮಾನ ಅಪಘಾತ ತನಿಖಾ ದಳ ಮನವಿ ಮಾಡಿದ ಬೆನ್ನಿಗೇ, ಅಮೆರಿಕ ವಿಮಾನ ಅಪಘಾತ ತನಿಖಾ ದಳದ ಮುಖ್ಯಸ್ಥೆಯಿಂದ ಈ ಹೇಳಿಕೆ ಹೊರ ಬಿದ್ದಿದೆ.







